ಮಡಿಕೇರಿ, ಜೂ. 6: ಕೆ. ನಿಡುಗಣೆ ಪಂಚಾಯಿತಿಗೆ ಸೇರಿದ ಗಾಳಿಬೀಡು ರಸ್ತೆಯಲ್ಲಿ ನೂರಾರು ಮರಗಳ ಮಾರಣ ಹೋಮ ನಡೆದಿರುವ ಬಗ್ಗೆ ಮಾಜಿ ಸಚಿವ ಯಂ.ಸಿ. ನಾಣಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಪ್ರಕರಣದ ಬಗ್ಗೆ ಸರಕಾರ ಕೂಡಲೇ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.ತಾ. 6ರ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಮರ ಹನನ ವರದಿಗೆ ಸ್ಪಂದಿಸಿ, ಇಂದು ಸ್ಥಳಕ್ಕೆ ಭೇಟಿ ನೀಡಿದ ಅವರು 808 ಮರಗಳನ್ನು ಕಡಿದು ಸಾಗಿಸಲು ಅನುಮತಿ ನೀಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಅಲ್ಲದೆ, ಕಂದಾಯ ಇಲಾಖೆಯ ವಿರುದ್ಧವೂ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದರು.ಸುಮಾರು 98.81 ಎಕರೆ ಜಾಗದಲ್ಲಿ ಕರ್ನಾಟಕ ಗೃಹ ಮಂಡಳಿ ಮನೆ ನಿವಾಸಗಳನ್ನು ನಿರ್ಮಿಸಲು ಈ ಜಾಗವನ್ನು ಪಡೆದುಕೊಂಡಿದ್ದು, ಇದರ ಹಿಂದೆ ಭಾರೀ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತಪಡಿಸಿದ ಶ್ರೀಯುತರು ಯಾವದೇ ಕಾರಣಕ್ಕೂ ಮರ ತೆರವುಗೊಳಿಸದಂತೆ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೇವಲ 35.03 ಎಕರೆ ಪ್ರದೇಶದಲ್ಲಿ 808 ಮರಗಳನ್ನು ಕಡಿಯಲು ಅವಕಾಶ ಹೇಗೆ ಕೊಟ್ಟರು ಎಂದು ಅವರು ಪ್ರಶ್ನಿಸಿದರು.ಪರಾಧೀನ ಬಾಣೆ, ಪರಾಧೀನ ಜಾಗ ಹಾಗೂ ಸಾಗು ಬಾಣೆಗಳಲ್ಲಿ ಯಾವದೇ ಕಾಫಿ ವ್ಯವಸಾಯವಿಲ್ಲದಿದ್ದರೂ ಕಂದಾಯ ಇಲಾಖೆ ಯಾವ ರೀತಿಯಲ್ಲಿ ಈ ಜಾಗಗಳಿಗೆ ಕಂದಾಯ ನಿಗದಿಪಡಿಸಿತ್ತು; ಈ ಜಾಗವನ್ನು ಯಾವ ರೀತಿಯಲ್ಲಿ ಖಾಸಗಿ ವ್ಯಕ್ತಿ ಖರೀದಿಸಿದರು ಹಾಗೂ ಈ ಜಾಗವನ್ನು ರೆಸಾರ್ಟ್ ನಿರ್ಮಾಣಕ್ಕೆ ಹೇಗೆ ಪರಿವರ್ತನೆ ಮಾಡಲಾಯಿತು ಎಂಬ ಬಗ್ಗೆ ಉನ್ನತಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದ ನಾಣಯ್ಯ ಅವರು, ಕರ್ನಾಟಕ ಗೃಹ ಮಂಡಳಿ ಈ ಜಾಗದ ಕುರಿತು ಬಹಿರಂಗ ಹೇಳಿಕೆ ನೀಡಬೇಕೆಂದರು.

ಬಡವರಿಗೆ ಸಹಾಯ ಮಾಡುತ್ತೇವೆಂಬ ಕಾರಣ ಮುಂದಿಟ್ಟು ಈ ಜಾಗದಲ್ಲಿ ಅವ್ಯಾಹತವಾಗಿ ಮರ ಕಡಿದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು ಸಂಬಂಧಿಸಿದವರ ಗಮನ ಸೆಳೆಯುವದಾಗಿ ವಿವರಿಸಿದರು.

ಅರಣ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಹಿರಿಯರಿಂದ ಕಿರಿಯರವರೆಗೂ ಇಲಾಖೆ ಭ್ರಷ್ಟಾಚಾರದಿಂದ ತುಳುಕುತ್ತಿದ್ದು,

(ಮೊದಲ ಪುಟದಿಂದ) ಈ ಜಾಗದಲ್ಲಿ 808 ಮರ ಕಡಿಯಲು ಅವಕಾಶ ಕೊಟ್ಟ ಅಧಿಕಾರಿ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಮರಗಳ ರಕ್ಷಣೆ ಮಾಡಬೇಕಾದವರು ಅವುಗಳ ಹನನಕ್ಕೆ ಕಾರಣರಾಗಿರುವದು ದುರಂತ ಎಂದರು.

ಸಿಸಿಎಫ್ ಹೇಳಿಕೆ : ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‍ಕುಮಾರ್ ಅವರ ಅಭಿಪ್ರಾಯ ಬಯಸಿದಾಗ ಈ ಪ್ರಕರಣದ ಕುರಿತು ದಾಖಲೆಗಳನ್ನು ತರಿಸಿ ಅಧ್ಯಯನ ಮಾಡಬೇಕಿದೆ ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಖಾಸಗಿ ವ್ಯಕ್ತಿಗೆ ಮರ ಕಡಿಯಲು ಅವಕಾಶ ನೀಡಿಲ್ಲ; ವಲಯ ಅರಣ್ಯಾಧಿಕಾರಿಗಳಿಗೆ ನೀಡಿರುವ ಆದೇಶದಲ್ಲಿ ಮರಗಳ ಮೇಲೆ ಜಮೀನಿನ ಮಾಲೀಕರಿಗೆ ಯಾವದೇ ಹಕ್ಕಿರುವದು ಕಂಡು ಬಂದಿಲ್ಲ; ಹಾಗಾಗಿ ಮರಗಳ ಮೇಲೆ ಸರ್ಕಾರದ ಹಕ್ಕಿರುವದರಿಂದ 808 ಮರಗಳನ್ನು ಕಡಿದು ಆನೆಕಾಡು ಸರ್ಕಾರಿ ಮರ ಸಂಗ್ರಹಾಲಯಕ್ಕೆ ಸಾಗಿಸಲು ಸೂಚಿಸಿದ್ದಾರೆ. ಅಲ್ಲದೆ, ಅವರ ಆದೇಶ ಪತ್ರದಲ್ಲಿ ಈ ಜಾಗಗಳು ಕರ್ನಾಟಕ ಗೃಹ ಮಂಡಳಿಗೆ ಸೇರಿದ್ದೆನ್ನುವ ಉಲ್ಲೇಖ ಕೂಡ ಇರುವದರಿಂದ ಮತ್ತು ಜಾಗ ಪರಿವರ್ತನೆಗೆ ಸರ್ಕಾರದ ಆದೇಶವೆ ಇರುವದರಿಂದ ಸದ್ಯದ ಪರಿಸ್ಥಿತಿಯಲ್ಲಿ ಈ ವಿಷಯದ ಕುರಿತು ತನ್ನ ಅಭಿಪ್ರಾಯವೇನೂ ಇಲ್ಲವೆಂದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕೆಂದು ಅವರು ಅಭಿಪ್ರಾಯಪಟ್ಟರು.

ಸದ್ಯಕ್ಕೆ ಮರ ಕಡಿತ ಸ್ಥಗಿತ - ಜಿಲ್ಲಾಧಿಕಾರಿ

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ತನಗೆ ಬಂದಿರುವ ಮಾಹಿತಿಯಂತೆ ಈ ಜಾಗ ಗೃಹ ಮಂಡಳಿ ಇಲಾಖೆಗೆ ಸೇರಿದ್ದು, ಮರ ಕಡಿದಿರುವ ಬಗ್ಗೆ ಸಾರ್ವತ್ರಿಕ ವಿರೋಧ ಬಂದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮರ ಕಡಿಯುವದನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿದೆ ಎಂದಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಬಳಿಕ ಮುಂದಿನ ಕ್ರಮ ಏನೆಂದು ನಿರ್ಧರಿಸುವದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಡೆವಲಪರ್ ಹೇಳಿಕೆ : ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ‘ಶಕ್ತಿ’ ಕಾರ್ಯಾಲಯಕ್ಕೆ ಬಂದ ಈ ಜಾಗದ ಡೆವಲಪರ್ ಬೆಂಗಳೂರಿನ ಆಂಜನೇಯುಲು ಅವರು, ತಾನು ಕರ್ನಾಟಕ ಗೃಹ ಮಂಡಳಿ ಪರವಾಗಿ ಈ ಜಾಗವನ್ನು ಅಭಿವೃದ್ಧಿ ಪಡಿಸುತ್ತಿದ್ದೇನೆ ಎಂದರು. ಜಾಗ ಅಭಿವೃದ್ಧಿ ಪಡಿಸುವ ನೆಪದಲ್ಲಿ ಅಮೂಲ್ಯ ಮರಗಳನ್ನು ನಾಶಪಡಿಸುವ ಅಗತ್ಯವೇನಿತ್ತು? ಅವುಗಳನ್ನು ಬಳಸಿಯೇ ಮನೆ ದಳಗಳನ್ನು ನಿರ್ಮಿಸಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಂದೆ ಅಮೂಲ್ಯ ಮರಗಳನ್ನು ರಕ್ಷಿಸುವದರೊಂದಿಗೆ ಹೊಸ ಸಸಿಗಳನ್ನು ನೆಡುವದಾಗಿ ಹೇಳಿಕೆಯಿತ್ತರು.