ಕೂಡಿಗೆ, ಜೂ. 6: ನಿನ್ನೆ ರಾತ್ರಿ ಗುಡುಗು-ಸಿಡಿಲು ಸಹಿತ ಮಳೆಯು ಸುರಿದಿದ್ದು, ಸಿಡಿಲಿನ ಬಡಿತಕ್ಕೆ ಸಿಕ್ಕಿದ ನಾಲ್ಕು ಮರಗಳು ತುಂಡಾಗಿರುವ ಘಟನೆಯು ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹಾರಂಗಿ ಅಣೆಕಟ್ಟೆ ಸಮೀಪದ ಮಾವಿನ ಹಳ್ಳ ಗ್ರಾಮದಲ್ಲಿ ನಡೆದಿದೆ.
ಕೃಷ್ಣ ಎಂಬವರ ಜಮೀನಿನಲ್ಲಿದ್ದ ಬೃಹತ್ ಗಾತ್ರದ ನಾಲ್ಕು ಮರಗಳಿಗೆ ಸಿಡಿಲು ಬಡಿದ ಪರಿಣಾಮ ಮರಗಳ ದೊಡ್ಡ ಕೊಂಬೆಗಳು ತುಂಡಾಗಿವೆ.
ಗಾಳಿಯ ರಭಸಕ್ಕೆ ಕೊಂಬೆಗಳು ಪಕ್ಕದ ಜಮೀನಿನವರ ತೆಂಗಿನ ಮರಕ್ಕೆ ಅಪ್ಪಳಿಸಿದೆ. ಸಮೀಪದಲ್ಲಿದ್ದ ಹುಲ್ಲಿನ ಮೆದೆಗಳು ಗಾಳಿಯ ರಭಸಕ್ಕೆ ಹಾರಿಹೋಗಿವೆ. ಸಿಡಿಲಿನ ಪರಿಣಾಮ ಈ ವ್ಯಾಪ್ತಿಯ 50ಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ.
ದಿನಂಪ್ರತಿ ಇದೇ ರೀತಿ ಸಿಡಿಲಿನ ಆರ್ಭಟ ಕಂಡುಬರುತ್ತಿದ್ದು, ಕೂಡುಮಂಗಳೂರು ಗ್ರಾಮ ಸಮೀಪದ ವಿಜಯನಗರದ ಜಯಣ್ಣ ಎಂಬವರ ತೆಂಗಿನ ಮರಕ್ಕೆ ಸಿಡಿಲು ಬಡಿದು, ತೆಂಗಿನ ಮರ ಸುಟ್ಟು ಕರಕಲಾಗಿದೆ.