ಮಡಿಕೇರಿ, ಜೂ. 6: ತೊರೆನೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾ. 4ರಂದು ಮೃತ್ಯುವಿಗೀಡಾಗಿರುವ ನಿವೃತ್ತ ಅಧಿಕಾರಿ ಡಾ. ಕೆ.ಎ. ಅಪ್ಪಯ್ಯ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ತಾ. 7ರಂದು (ಇಂದು) ಸ್ವಗ್ರಾಮ ಕುಂಬಳದಾಳುವಿನಲ್ಲಿ ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ. ಮೃತರ ಪುತ್ರಿ ಚೈತ್ರ ಕೆನಡಾದಿಂದ ಆಗಮಿಸಿದ್ದು, ಪತ್ನಿ ಮೀನಾ ಅಪ್ಪಯ್ಯ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೀನಾ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಇದೀಗ ಪತಿಯ ಅಗಲಿಕೆ ಅರಿವಿಗೆ ಬಂದಿದೆ ಎನ್ನಲಾಗಿದೆ. ಈ ಸಂಕಷ್ಟದ ನಡುವೆಯೂ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಅಪ್ಪಯ್ಯ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಮೃತರ ಕುಟುಂಬಕ್ಕೆ ಕರುಣಿಸಲು ಮತ್ತು ಮೀನಾ ಅಪ್ಪಯ್ಯ ಶೀಘ್ರ ಗುಣಮುಖರಾಗಲೆಂದು ಆಶಿಸಿದ್ದಾರೆ.