ವೀರಾಜಪೇಟೆ, ಜೂ.4: ಬೆಳ್ಳುಮಾಡು ಕೃಷಿ ಪತ್ತಿನ ಸಹಕಾರ ಸಂಘದ ಪರಿಹಾರ ವಿತರಣೆ ಸಮಾರಂಭದಲ್ಲಿ ಕಳೆದ ಸಾಲಿನ ಮಳೆ ಸಂತ್ರಸ್ತರಾದ ಮೇಘತ್ತಾಳು ಗ್ರಾಮದವರು ಸರಕಾರದ ಪರಿಹಾರ ನೀತಿಯ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಕೋಟಿ ಕೋಟಿ ಪರಿಹಾರ ಹರಿದು ಬಂದರೂ ನೊಂದವರಿಗೆ ಪರಿಹಾರ ಸೂಕ್ತ ರೀತಿಯಲ್ಲಿ ಸಿಕ್ಕಿಲ್ಲ. ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸುಮ್ಮನೆ ಮಾದ್ಯಮದಲ್ಲಿ ಪರಿಹಾರದ ಹೊಳೆ ಹರಿಸುತ್ತಿದ್ದಾರೆ. ಅನೇಕ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲವಾದರೂ ಮನೆ ಬಿದ್ದಿಲ್ಲವಾದ ಕಾರಣ ಅವರಿಗೆ ಮನೆಯಿಲ್ಲ ಹಾಗೂ ಪರಿಹಾರ ಸಹ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ಅಳಲು ತೋಡಿಕೊಂಡರು.
ಸಮಾರಂಭದಲ್ಲಿ ಮಾತನಾಡಿದ ಮಡ್ಲಂಡ ಮಾಚಯ್ಯ, ಚೆನ್ನಪಂಡ ಮುತ್ತಣ್ಣ, ಮಡ್ಲಂಡ ಮೋನಿಶ್, ಮಡ್ಲಂಡ ಲಿಂಗರಾಜು, ಮಡ್ಲಂಡ ತಿಮ್ಮಯ್ಯ ಮುಂತಾದವರು ಮೇಘಾತ್ತಾಳು ಗ್ರಾಮದ ದುಸ್ಥಿತಿಯನ್ನು , ಅಂದಿನ ಕರಾಳದಿನದ ನೋವನ್ನು ವಿವರಿಸಿದ್ದಲ್ಲದೆ, ಸರಕಾರ ಹಾಗೂ ಅಧಿಕಾರಿಗಳು ಬಿಕ್ಷುಕರಿಗೆ ತಮ್ಮ ಜೇಬಿನಿಂದ ಹಣ ನೀಡುವಂತೆ ವರ್ತಿಸುತ್ತಿರುವ ನೀತಿಯನ್ನು ನೋವಿನಿಂದ ವಿವರಿಸಿದರು. ಅನೇಕ ಮನೆಗಳು ಕುಸಿಯುವ ಹಂತದಲ್ಲಿ ಇದ್ದರೂ ಅದು ಬಿಳದ ಕಾರಣ ಪರಿಹಾರ ಇಲ್ಲ ಎಂದಿದ್ದಾರೆ, ಈ ಮಳೆಗಾಲದಲ್ಲಿ ಬಿದ್ದರೆ ನಮ್ಮ ಗತಿ ಏನು, ಎಲ್ಲಿ ಹೋಗಬೇಕು ಎಂದು ಸಂತ್ರಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.
10 ಸಾವಿರ ರೂ. ಮನೆ ಬಾಡಿಗೆ ಸಹ ನುಡಿದಂತೆ ಸಿಕ್ಕಿಲ್ಲ ಎಂದರು. ತೋಟ, ಗದ್ದೆಗಳು ಕಣ್ಮರೆಯಾಗಿ ಹೋಗಿವೆ ಕೃಷಿ ಸಾಧ್ಯವೇ ಇಲ್ಲ. ಆದರೂ ಕೆಲವರಿಗೆ ಹೆಕ್ಟೆರ್‍ಗೆ 16 ಸಾವಿರ ಪರಿಹಾರ, ಕೆಲವರಿಗೆ ಎಲ್ಲರಿಗೂ ನೀಡಿದಂತೆ ಮಳೆ ಹಾನಿಯಲ್ಲಿ ಒಟ್ಟು 30-36 ಸಾವಿರ ಹಣ ಮಾತ್ರ ಸಿಕ್ಕಿದೆ. ಸಂಘ ಸಂಸ್ಥೆಗಳೇ ನೇರವಾಗಿ ನೀಡಿದ ಸಹಾಯ ಮಾತ್ರ ಇವರಿಗೆ ಆಶ್ರಯವಾಗಿದೆ. ಮಕ್ಕಳ ಓದಿಗೆ ಸಹ ಇಂದಿಗೂ ಆಡಚಣೆ ಇದೆ , ಆದರೆ ಕೆಲವು ಶಿಕ್ಷಣ ಸಂಸ್ಥೆ ಮಾತ್ರ ಆಶ್ರಯ ನೀಡಿದೆ ಹೊರತು ಸರಕಾರ ಸಹಾಯ ಮಾಡಲು ಮೀನಾಮೇಷ ಎಣಿಸುತ್ತಿದೆ, ಸರಕಾರ ಇನ್ನಾದರೂ ನೊಂದ ಎಲ್ಲಾ ಫಲಾನುಭವಿಗಳಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿದ್ದಾರೆ. - ರಜಿತ ಕಾರ್ಯಪ್ಪ