ಕುಶಾಲನಗರ, ಜೂ. 4: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು, ಪೋಷಕರನ್ನು ಭಯಭೀತಿಯಿಂದ ಕಾಣುವಂತಾಗ ಬಾರದು ಎಂದು ವೈದ್ಯೆ ಡಾ. ನಾಗಲಕ್ಷ್ಮಿ ಚೌಧರಿ ಕರೆ ನೀಡಿದರು.
ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್, ಯುವಶಕ್ತಿ ಬೆಂಗಳೂರು, ಅಮೇರಿಕಾದ ಕಾಟಿ ಪ್ರೀಮಿಯರ್ ಲೀಗ್ ಸಂಯುಕ್ತಾಶ್ರಯದಲ್ಲಿ ಕೊಪ್ಪ ಮಿನಿಸ್ಟರ್ಸ್ ಕೋರ್ಟ್ ಸಭಾಂಗಣ ದಲ್ಲಿ ಕೊಡಗಿನ ಜಲಪ್ರಳಯಕ್ಕೆ ನಲುಗಿದ ಸಂತ್ರಸ್ತ ಕುಟುಂಬಗಳಿಗೆ ಧನ ಸಹಾಯ ಮತ್ತು ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಎಸ್.ಎಲ್.ಎನ್. ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎಸ್.ಎಲ್.ಎನ್. ವಿಶ್ವನಾಥ್ ಮಾತನಾಡಿ ವೈಯಕ್ತಿಕ ಸಮಸ್ಯೆಗಳನ್ನು ಬದಿಗಿಟ್ಟು, ವೃತ್ತಿಯಲ್ಲಿ ಪ್ರಾಮಾಣಿಕ ವಾಗಿ ತೊಡಗಿ ಸಮಾಜಮುಖಿ ಕಾರ್ಯಗಳಿಗೆ ಸಹಾಯಹಸ್ತ ನೀಡಬೇಕು ಎಂದರು. ಅಮೇರಿಕಾದ ಹೌಸ್ಟನ್ ಟೆಕ್ಸಾಸ್ನ ಕಾಟಿ ಪ್ರೀಮಿಯರ್ ಲೀಗ್ ತಂಡದ ಅವಿನಾಶ್ ಬಸವರಾಜ್ ಮಾತನಾಡಿ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲು ಸಮಾನ ಮನಸ್ಸಿನ ಸ್ನೇಹಿತರ ತಂಡ ಅಗತ್ಯವೆಂದರು.
ಜಿಲ್ಲಾ ಹೊಟೇಲ್ ಹಾಗೂ ರೆಸಾರ್ಟ್ ಅಸೋಶಿಯೇಶನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿದರು. ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನೌಶಾದ್ ಜನ್ನತ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರೋಟರಿ ಸಂಸ್ಥೆಯ ಪ್ರಮುಖ ಎಸ್.ಕೆ. ಸತೀಶ್, ಬೆಂಗಳೂರು ದೃಷ್ಟಿ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕ ಸಂತೋಷ್ ಕೊಡಂಕೇರಿ, ಯುವಶಕ್ತಿ ಸಂಘಟನೆ ರಾಜ್ಯ ಉಪಾಧ್ಯಕ್ಷ ವಿಜಯ ಬಾವರೆಡ್ಡಿ, ಜಂಟಿ ಕಾರ್ಯದರ್ಶಿ ವಿ. ಬಾಬು ರೆಡ್ಡಿ, ಮೊದಲಾದವರು ಉಪಸ್ಥಿತರಿದ್ದರು. 18 ಸಂತ್ರಸ್ತ ಕುಟುಂಬಗಳಿಗೆ ಹಾಗೂ 35 ವಿದ್ಯಾರ್ಥಿಗಳಿಗೆ ರೂ. 4.5ಲಕ್ಷ ಧನ ಸಹಾಯ ನೀಡಲಾಯಿತು. ಇದೇ ಸಂದರ್ಭ ಡಾ. ನಾಗಲಕ್ಷ್ಮಿ ಚೌಧರಿ ಸೇರಿದಂತೆ ಇತರರಿಗೆ ಕೊಡಗು ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.