ಮಡಿಕೇರಿ, ಜೂ. 4: ತಣ್ಣಿಮಾನಿ ಸುತ್ತಮುತ್ತ ಅರಣ್ಯ ಇಲಾಖೆ ಸರ್ವೆ ಮಾಡುತ್ತಿರುವ ಬಗ್ಗೆ ಆತಂಕಗೊಂಡಿ ರುವ ಗ್ರಾಮಸ್ಥರು ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಣ್ಣಿಮಾನಿ ನಿವಾಸಿ ಗಳು ಏಕಾಏಕಿ ಸರ್ವೆ ಕಾರ್ಯ ಆರಂಭಿಸುವ ಮೂಲಕ ಅರಣ್ಯ ಅಧಿಕಾರಿಗಳು ಕಿರುಕುಳ ನೀಡ ಲಾರಂಭಿಸಿದ್ದಾರೆ ಎಂದು ಆರೋಪಿಸಿ ದರು. ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸದಿದ್ದಲ್ಲಿ ಭಾಗಮಂಡಲ ಹೋಬಳಿಯ ಎಲ್ಲಾ ಗ್ರಾಮಸ್ಥರು ಒಗ್ಗೂಡಿ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು. ಗ್ರಾಮಸ್ಥರ ಪರವಾಗಿ ಮಾತನಾಡಿದ ಮಡಿಕೇರಿ ತಾಲೂಕು ಲ್ಯಾಂಪ್ಸ್ ನಿರ್ದೇಶಕ ಹಾಗೂ ಬಿಜೆಪಿ ಎಸ್‍ಟಿ ಮೋರ್ಚಾದ ಅಧ್ಯಕ್ಷ ಮಿಟ್ಟು ರಂಜಿತ್ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನ ರವಿ ಅವರುಗಳು ಅರಣ್ಯ ಇಲಾಖೆ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೊಡಗಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿಯ ಹೆಸರಿನಲ್ಲಿ ಅರಣ್ಯದ ಅಂಚಿನಲ್ಲಿರುವ ಗ್ರಾಮ ಗಳಲ್ಲಿ ಸರ್ವೆ ಕಾರ್ಯವನ್ನು ದಿಢೀರ್ ಆಗಿ ಆರಂಭಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಆ ಜಾಗ ಅರಣ್ಯ ಇಲಾಖೆಗೆ ಸೇರಿದ್ದೆಂದು ಹೇಳುವ ಮೂಲಕ ವಿನಾ ಕಾರಣ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.ಕಳೆದ 25-30 ವರ್ಷಗಳ ಹಿಂದೆ ಕಂದಾಯ ಜಮೀನಿನ ಪಕ್ಕದಲ್ಲಿದ್ದ ಜಮೀನನ್ನು ಅರಣ್ಯ ಇಲಾಖೆಯವರು ಸರ್ವೆ ಮಾಡಿ ತಮ್ಮ ಗಡಿ ಭಾಗ ಗುರುತಿಸಿ ಹದ್ದುಬಸ್ತು ಮಾಡಿ ಸೋಲಾರ್ ಬೇಲಿ ಅಳವಡಿಸಿದ್ದರೂ, ಇದೀಗ ಜನವಸತಿ ಇರುವ ಕಂದಾಯ ಜಾಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮದ ಅರಣ್ಯದ ಅಂಚಿನಲ್ಲಿ ರುವ ಪ್ರದೇಶವು ಕಂದಾಯ ಜಾಗ ವಾಗಿದ್ದು, ಇಲ್ಲಿ ಸುಮಾರು 70-80 ವರ್ಷಗಳಿಂದ ಜನರು ಕೃಷಿ ಮಾಡಿಕೊಂಡು ವಾಸವಾಗಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದವರು ಹಾಗೂ ಇತರ ಎಲ್ಲಾ ಜನಾಂಗದ ಕಡು ಬಡವರೇ ಈ ಪ್ರದೇಶದಲ್ಲಿದ್ದು ಅತ್ಯಂತ ಕಷ್ಟದಿಂದ ಕೂಲಿ ಮಾಡಿ ಜೀವನ ಸಾಗಿಸಿಕೊಂಡು ಬರುತ್ತಿದ್ದಾರೆ ಎಂದು ವಿವರಿಸಿದರು. ಅರಣ್ಯ ಇಲಾಖೆ ತೆಗೆದುಕೊಂಡಿ ರುವ ಜನ ವಿರೋಧಿ ಕ್ರಮದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಈ ಕ್ಷೇತ್ರದ ಸಂಸದರ ಗಮನ ಸೆಳೆಯುವದಾಗಿ ರವಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥ ರಾದ ಕೆ.ಆರ್. ದಾಸಪ್ಪ, ದೇವಂಗೋಡಿ ಭಾಸ್ಕರ, ಕೆ. ಕೆ. ಪಾರ್ವತಿ ಹಾಗೂ ಕೆ. ಸಿ. ಸರಸ್ವತಿ ಉಪಸ್ಥಿತರಿದ್ದರು.