ಸಿದ್ದಾಪುರ, ಜೂ. 4: ನೆಲ್ಯಹುದಿಕೇರಿ, ಅಭ್ಯತ್ ಮಂಗಲ ಹಾಗೂ ಅತ್ತಿಮಂಗಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಮತ್ತೆ ಕಾಡಾನೆ ಹಿಂಡು ಬೀಡುಬಿಟ್ಟು ಆತಂಕ ಸೃಷ್ಟಿಸಿದೆ.

ನೆಲ್ಯಹುದಿಕೇರಿ ಹಾಗೂ ಅಭ್ಯತ್ ಮಂಗಲ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಪೈಕಿ ಉಪಟಳ ನೀಡುತ್ತಿದ್ದ 2 ಪುಂಡಾನೆಗಳನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ನೆಲ್ಯಹುದಿಕೇರಿ ಹಾಗೂ ಚೆಟ್ಟಳ್ಳಿಯಲ್ಲಿ ಸೆರೆ ಹಿಡಿದಿದೆ. ಆದರೆ ಈ ವ್ಯಾಪ್ತಿಯಲ್ಲಿ 25 ಕ್ಕೂ ಅಧಿಕ ಕಾಡಾನೆಗಳು ವಿವಿಧ ತೋಟಗಳಲ್ಲಿ ಬೀಡುಬಿಟ್ಟು, ದಾಂಧಲೆ ನಡೆಸುತ್ತಿದೆ. ಸೋಮವಾರದಂದು ಅರೆಕಾಡು ರಸ್ತೆಯ ಕಾಟಿಬಾಣೆ ಕಾಫಿ ತೋಟದೊಳಗೆ 10 ಕ್ಕೂ ಅಧಿಕ ಕಾಡಾನೆಗಳು ಹಾಡುಹಗಲೇ ರಾಜಾರೋಷವಾಗಿ ಸುತ್ತಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ವಿಲಾಸ್ ಗೌಡ ನೇತೃತ್ವದಲ್ಲಿ ಆರ್.ಆರ್.ಟಿ ತಂಡ ಹಾಗೂ ಅರಣ್ಯ ಸಿಬ್ಬಂದಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದ್ದರು.

ಇತ್ತೀಚೆಗೆ ನೆಲ್ಯಹುದಿಕೇರಿಯ ಮೇರಿಲ್ಯಾಂಡ್ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿದ್ದ ಪುಂಡಾನೆಯನ್ನು ನಾಗರಹೊಳೆ ಅರಣ್ಯಕ್ಕೆ ಬಿಟ್ಟಿರುವದಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಅಮ್ಮತ್ತಿ ಹೋಬಳಿ ಅಧ್ಯಕ್ಷ ಪ್ರವೀಣ ಬೋಪಯ್ಯ, ಸೆರೆಯಾದ ಪುಂಡಾನೆಯನ್ನು ದುಬಾರೆಯಲ್ಲಿ ಪಳಗಿಸದೇ, ಮತ್ತೆ ಅರಣ್ಯಕ್ಕೆ ಬಿಟ್ಟಿರುವದು ಸಮಂಜಸವಲ್ಲ. ವೀರಾಜಪೇಟೆ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಪುಂಡಾನೆಗಳನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.