ಮಡಿಕೇರಿ, ಜೂ. 4 : ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಮತ್ತು ಜೀವ ಹಾನಿ ಉಂಟಾಗಿದ್ದು, ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಬರುವ ರಾಜಾಸೀಟು ಉದ್ಯಾನವನಕ್ಕೆ ಪ್ರತಿ ನಿತ್ಯವು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇಲ್ಲಿ ವಯಸ್ಸಾದ ಮತ್ತು ಅಪಾಯದ ಅಂಚಿನಲ್ಲಿರುವ ಕಾಡು ಜಾತಿಯ ಮರಗಳಿರುವದರಿಂದ, ಮಳೆ ಹಾಗೂ ಬಿರುಗಾಳಿಗೆ ಉದ್ಯಾನವನ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ
ಹಾಗೂ ಜನರಿಗೆ ಜೀವ ಹಾನಿ ಉಂಟಾಗಬಹುದೆಂದು ಮುಂಜಾಗೃತಾ ಕ್ರಮವಾಗಿ ರಾಜಾಸೀಟು ಉದ್ಯಾನವನ ಹಾಗೂ ರಾಜಾಸೀಟು ನರ್ಸರಿ ಪ್ರದೇಶದ ಸುತ್ತಮುತ್ತಲ್ಲಿನ ಅಪಾಯದ ಅಂಚಿನಲ್ಲಿರುವ ಕಾಡು ಮರಗಳನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ 2018ರ ಅಗಸ್ಟ್ 28 ರಂದು ಪತ್ರ ಬರೆಯಲಾಗಿತ್ತು. ಆ ದಿಸೆಯಲ್ಲಿ ಅರಣ್ಯ ಇಲಾಖೆಯವರು ತಮ್ಮ ಕಾರ್ಯ ವ್ಯಾಪ್ತಿಗೆ ಅನುಗುಣವಾಗಿ ರಾಜಾಸೀಟು ಉದ್ಯಾನವನದ ಸುತ್ತಮುತ್ತಲಿನ ಮರಗಳನ್ನು ಪರಿಶೀಲಿಸಿ ಅಪಾಯದ ಅಂಚಿನಲ್ಲಿರುವ ಮತ್ತು ವಯಸ್ಸಾದ ಮರಗಳನ್ನು ಪ್ರವಾಸಿಗರ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ನಿನ್ನೆ ತೆರವುಗೊಳಿಸಿರುತ್ತಾರೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.