ಮಡಿಕೇರಿ, ಜೂ. 4: ಇಬ್ಬರು ಹೆಣ್ಣು ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವದಾಗಿ ಬಂದ ದೂರನ್ನು ಆಧರಿಸಿ ರಕ್ಷಣಾ ತಂಡವು ವೀರಾಜಪೇಟೆ ತಾಲೂಕಿನ ಕಳತ್ಮಾಡು ಗ್ರಾಮಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದರು. ಅಲ್ಲಿನ ತೋಟದ ಮಾಲೀಕರೊಬ್ಬರು ಸಾಲವನ್ನು ತೀರಿಸಲು ಅಶಕ್ತರಾದ ಸಾಲಗಾರರ ಮಕ್ಕಳನ್ನು ಕಳೆದ ಒಂದು ತಿಂಗಳಿನಿಂದ ಒತ್ತೆಯಾಳುಗಳನ್ನಾಗಿ ಇರಿಸಿರುವದಾಗಿ ಬಂದ ದೂರಿನ ಆಧಾರದಲ್ಲಿ ತಿಳಿದುಬಂದಿದ್ದು, ಈ ಸಂದರ್ಭ ಅಲ್ಲಿದ್ದ ಎರಡು ಹೆಣ್ಣು ಮಕ್ಕಳನ್ನು ರಕ್ಷಿಸಲಾಯಿತು. ಈ ಮಕ್ಕಳನ್ನು ಪೋಷಣೆಯ ಹಾಗೂ ರಕ್ಷಣೆಯ ಉದ್ದೇಶ ದಿಂದ ಮಡಿಕೇರಿಯಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ದಾಖಲಿಸಲಾಗಿದೆ.3ನೇ ತರಗತಿ ಹಾಗೂ 6ನೇ ತರಗತಿ ಓದುತ್ತಿರುವ ಈ ಹೆಣ್ಣು ಮಕ್ಕಳನ್ನು ಮನೆಯಲ್ಲಿ ಅವರ ಪೋಷಕರು ಇಲ್ಲದಿದ್ದ ವೇಳೆ ತಮ್ಮ ಮನೆಗೆ ತೋಟ ಮಾಲೀಕರು ಕರೆದೊಯ್ದರೆನ್ನಲಾಗಿದೆ. ಪೋಷಕರು ಸುಮಾರು ರೂ. 85,000 ದಷ್ಟು ಹಣವನ್ನು ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ತೋಟ ಮಾಲೀಕರಿಂದ ಸಾಲವಾಗಿ ಪಡೆದಿದ್ದರು. ಆದರೆ, ಈ ಪೋಷಕರು ಅಲ್ಲಿ ಕೆಲಸ ಬಿಟ್ಟಿದ್ದು ಬಳಿಕ ಈ ಮಾಲೀಕರೇ ನೀಡಿದ್ದರೆನ್ನಲಾದ ಶೆಡ್ ಒಂದರಲ್ಲಿ ವಾಸಿಸುತ್ತಿದ್ದರು. ಸಾಲ ಕೊಡದೆ ಬಾಕಿ ಮಾಡಿಕೊಂಡುದರಿಂದ ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಬಗ್ಗೆ ಸಂಘಟನೆಯೊಂದಕ್ಕೆ ಪೋಷಕರು ದೂರು ನೀಡಿದ್ದರು. ಸಂಘಟನೆ ಮೂಲಕ ಮಕ್ಕಳ ಕಲ್ಯಾಣ ಸಮಿತಿಗೆ ಪುಕಾರು ದೊರೆತು ಅಧಿಕಾರಿಗಳ ನೆರವಿನಿಂದ ಈ ಮಕ್ಕಳನ್ನು ಬಂಧ ಮುಕ್ತಗೊಳಿಸ ಲಾಯಿತು. ತಾನು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವದಾಗಿ ತೋಟ ಮಾಲೀಕರು ಸಮಿತಿ ಪ್ರಮುಖ ರೊಂದಿಗೆ ಹೇಳಿಕೊಂಡರು. ಆದರೆ, ಸಮಿತಿಗೆ ದೊರೆತ ಮಾಹಿತಿಯನ್ವಯ ಮಕ್ಕಳನ್ನು ನಿತ್ಯ ಶಾಲೆಗೆ ಕಳುಸಹಿಸುತ್ತಿ ರಲಿಲ್ಲವೆನ್ನಲಾಗಿದೆ.
(ಮೊದಲ ಪುಟದಿಂದ) ಕಾರ್ಯಾಚರಣೆ ಸಂದರ್ಭ ವಿಶೇಷ ಮಕ್ಕಳ ಪೊಲೀಸ್ ಘಟಕದ ಸಿಬ್ಬಂದಿಗಳಾದ ಯು.ಎ.ಮಹೇಶ್ ಹಾಗೂ ಸುಮತಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಆರ್. ಸಿರಾಝ್ ಅಹ್ಮದ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ಮಹದೇವ ಸ್ವಾಮಿ, ಮಕ್ಕಳ ಸಹಾಯ ವಾಣಿಯ ಸಂಯೋಜಕ ನವೀನ್ ಕುಮಾರ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಬಿ.ಎ. ಸಚಿನ್ ಸುವರ್ಣ ಹಾಜರಿದ್ದರು.
ಜಿಲ್ಲಾ ಬಾಲಕಿಯರ ಬಾಲ ಮಂದಿರದ ಅಧಿಕಾರಿ ಮಮ್ತಾಜ್ ಅವರ ಪ್ರಕಾರ ರಕ್ಷಣಾ ತಂಡವು ಸೂಕ್ತ ತನಿಖೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವವರೆಗೂ ಬಾಲಕಿಯರನ್ನು ಬಾಲ ಮಂದಿರದಲ್ಲಿ ರಕ್ಷಿಸಲಾಗುವದು; ಅವರ ವಿದ್ಯಾಭ್ಯಾಸ ಮುಂದುವರಿಕೆಗೆ ಮುತುವರ್ಜಿ ವಹಿಸಲಾಗುವದು. ಇದೇ ಕೇಂದ್ರದಲ್ಲಿ ಮುಂದುವರಿಸುವ ನಿರ್ಧಾರ ಕೈಗೊಂಡರೂ ಉನ್ನತ ಶಿಕ್ಷಣದ ವ್ಯವಸ್ಥೆಯನ್ನೂ ಸರಕಾರೀ ಮಟ್ಟದಲ್ಲಿ ಕೈಗೊಳ್ಳಲಾಗುವದು ಎಂದು ಅಭಿಪ್ರಾಯ್ರಪಟ್ಟರು. ಸಮಿತಿಯ ಯೋಜನಾ ನಿರ್ದೇಶಕ ಸಿರಾಜ್ ಅಹ್ಮದ್ ಅವರ ಅನಿಸಿಕೆಯಂತೆ ಪೋಷಕರು ಭರವಸೆಯೊಂದಿಗೆ ಮಕ್ಕಳನ್ನು ನೋಡಿಕೊಳ್ಳುವ ಆಶ್ವಾಸನೆ ನೀಡಿದರೆ ಸಮಿತಿಯ ಸಭೆಯಲ್ಲಿ ನಿರ್ಧಾರ ಕೈಗೊಂಡು ಒಪ್ಪಿಸಬಹುದಾಗಿದೆ. ಇಲ್ಲದಿದ್ದಲ್ಲಿ ಬಾಲ ಮಂದಿರದಲ್ಲಿಯೇ ಮಕ್ಕಳ ಪೋಷಣೆ ಮಾಡಲಾಗುತ್ತದೆ ಎಂದು ತಿಳಿಸಿzರು.