ಸೋಮವಾರಪೇಟೆ, ಜೂ. 4: ಕಳೆದ 2010-11ರಲ್ಲಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ನಿಧಿಯಡಿ ರೂ. 10 ಲಕ್ಷ ವೆಚ್ಚದಲ್ಲಿ ಪಟ್ಟಣದ ಆನೆಕೆರೆ ಸಮೀಪ ನಿರ್ಮಾಣಗೊಂಡಿದ್ದ ಉದ್ಯಾನವನ ನಿರ್ವಹಣೆಯ ಕೊರತೆಯಿಂದ ಇದೀಗ ತುಕ್ಕು ಹಿಡಿಯುತ್ತಿದೆ.

ಪಟ್ಟಣ ಪಂಚಾಯಿತಿಗೆ ಬಿಡುಗಡೆಯಾದ ರೂ. 5 ಕೋಟಿ ಅನುದಾನದ ಪೈಕಿ ರೂ. 10 ಲಕ್ಷ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲಾಯಿತು. ನಿರ್ಮಾಣವಾದ ಒಂದು ವರ್ಷ ಗುತ್ತಿಗೆದಾರರೇ ನಿರ್ವಹಣೆ ಮಾಡುತ್ತಿದ್ದರು. ಉದ್ಯಾನವನದ ಒಳಗೆ ಮಕ್ಕಳಿಗೆ ಆಟವಾಡಲು ಅಗತ್ಯ ಪರಿಕರ, ಸಾರ್ವಜನಿಕರಿಗೆ ವಾಕಿಂಗ್ ಮಾಡಲು ಸ್ಥಳಾವಕಾಶ, ಹುಲ್ಲಿನ ಲಾನ್, ವಿಶ್ರಾಂತಿ ಪಡೆಯಲು ಬೆಂಚ್‍ಗಳನ್ನು ಅಳವಡಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಉದ್ಯಾನವನಕ್ಕೆ ಸಾರ್ವಜನಿಕರು ಭೇಟಿ ನೀಡುತ್ತಿದ್ದರು.

ಆದರೆ ಒಂದು ವರ್ಷದ ನಂತರ ನಿರ್ವಹಣೆಯ ಕೊರತೆಯಿಂದ ಆಕರ್ಷಣೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿತು. ಈಗಂತೂ ಇದನ್ನು ಉದ್ಯಾನವನ ಎಂದು ಹೇಳಲೂ ಸಹ ಆಗದಂತಹ ಸ್ಥಿತಿಗೆ ತಲುಪಿದ್ದು, ಸಾರ್ವಜನಿಕರು ಪಂಚಾಯಿತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಉದ್ಯಾನವನದ ಒಳಗೆ ಅಳವಡಿಸಿದ್ದ ಮಕ್ಕಳ ಜೋಕಾಲಿಗಳು ತುಂಡಾಗಿ ನೇತಾಡುತ್ತಿದ್ದರೆ, ಅಸಮರ್ಪಕ ನಿರ್ವಹಣೆಯಿಂದಾಗಿ ಪೈಪ್‍ಗಳು ತುಕ್ಕು ಹಿಡಿದಿವೆ. ಮಕ್ಕಳು ಈ ಉದ್ಯಾನವನದೊಳಗೆ ಕಾಲಿಡುವದಕ್ಕೂ ಭಯಬೀಳುವಂತಾಗಿದ್ದು, ಹಚ್ಚಹಸಿರಿನಿಂದ ನಳನಳಿಸುತ್ತಿದ್ದ ಲಾನ್ ನೀರಿಲ್ಲದೇ ಮಂಕಾಗಿದೆ.

ಪಟ್ಟಣ ಪಂಚಾಯಿತಿ ನಿರ್ವಹಣೆಯ ಜವಾಬ್ದಾರಿಯಿಂದ ನುಣುಚಿಕೊಂಡಿರುವ ಪರಿಣಾಮ ಸುಸಜ್ಜಿತ ಉದ್ಯಾನವನ ಸಾರ್ವಜನಿಕ ಉಪಯೋಗದಿಂದ ದೂರ ಉಳಿಯುವಂತಾಗಿದೆ.

ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಉದ್ಯಾನವನಕ್ಕೆ ಆಗಮಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ಮಧ್ಯೆ ಕೆಲ ಪೋಕರಿಗಳು ಉದ್ಯಾನವನದ ಹೊರಭಾಗ ಅಳವಡಿಸಿರುವ ಕಲ್ಲುಬೆಂಚಿನಲ್ಲಿ ಕುಳಿತು ಧೂಮಪಾನ, ಮದ್ಯಪಾನ ಮಾಡುತ್ತಿದ್ದಾರೆ.

ಇನ್ನು ಇದೇ ಯೋಜನೆಯಡಿ ಪಟ್ಟಣದ ಮಹದೇಶ್ವರ ಬಡಾವಣೆಯಲ್ಲಿ ನಿರ್ಮಿಸಿರುವ ಉದ್ಯಾನವನದ ಸ್ಥಿತಿಯೂ ಭಿನ್ನವಾಗಿಲ್ಲ. ಮೂಲಭೂತ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದ್ದರೆ, ನಿರ್ವಹಣೆಯಿಲ್ಲದೇ ‘ಉದ್ಯಾನವನ’ ಎಂಬ ಹೆಸರಿಗೆ ಮಸಿಬಳಿಯುವಂತಿದೆ. ಸರ್ಕಾರದ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ 2 ಉದ್ಯಾನವನಗಳು ಅವನತಿಯ ಹಾದಿ ಹಿಡಿದಿರುವದು ವಿಪರ್ಯಾಸ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿರುವ ಪ.ಪಂ.ಮುಖ್ಯಾಧಿಕಾರಿ ನಟರಾಜ್, ಉದ್ಯಾನವನದ ವಸ್ತುಸ್ಥಿತಿಯ ಬಗ್ಗೆ ಖುದ್ದು ಪರಿಶೀಲಿಸಿದ್ದು, ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ.ಪಂ. ಅಭಿಯಂತರ ವೀರೇಂದ್ರ ಪ್ರತಿಕ್ರಿಯೆ ನೀಡಿ, ಉದ್ಯಾನವನಗಳ ನಿರ್ವಹಣೆಗೆ ಸಿಬ್ಬಂದಿಯ ಅಗತ್ಯವಿದ್ದು, ಪಂಚಾಯಿತಿಯಲ್ಲಿ ಈಗಾಗಲೇ ಸಿಬ್ಬಂದಿಯ ಕೊರತೆ ಇದೆ. ಉದ್ಯಾನವನದ ದುರಸ್ತಿ ಕಾರ್ಯಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ಮುಂದಿನ 1 ವಾರದೊಳಗೆ ಕಾಮಗಾರಿ ನಡೆಯಲಿದೆ. ಆನೆಕೆರೆಯ ಬಳಿ ನೂತನವಾಗಿ ಬೋರ್‍ವೆಲ್ ಕೊರೆದು ಉದ್ಯಾನವನಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗುವದು. ಮಹದೇಶ್ವರ ಬಡಾವಣೆಯ ಉದ್ಯಾನವನವನ್ನೂ ದುರಸ್ತಿಗೆ ಕ್ರಮ ವಹಿಸಲಾಗುವದು ಎಂದು ತಿಳಿಸಿದ್ದಾರೆ.

- ವಿಜಯ್ ಹಾನಗಲ್