ಕುಶಾಲನಗರ, ಜೂ. 4: ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಎಂ.ಎಸ್.ಚಿಣ್ಣಪ್ಪ ಅವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಜೇನುಕಲ್ಲು ಬೆಟ್ಟ ವ್ಯಾಪ್ತಿಯ ಹಿರಿಕರದ ಚೌಡಿ ದೇವರ ಬನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ವಲಯ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಚಿಣ್ಣಪ್ಪ ಅವರನ್ನು ಗೌರವಿಸಿ ಬೀಳ್ಕೊಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಎಸ್. ಚಿಣ್ಣಪ್ಪ, ತಮ್ಮ 33 ವರ್ಷಗಳ ಸೇವೆಯ ದಿನಗಳನ್ನು ಸ್ಮರಿಸಿಕೊಳ್ಳುವದರೊಂದಿಗೆ ಇಲಾಖೆ ಸಿಬ್ಬಂದಿಗಳು ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು. ಪ್ರಾರಂಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಂತರ ಕೊಡಗು ಜಿಲ್ಲೆಯ ವೀರಾಜಪೇಟೆ, ಕುಶಾಲನಗರ ಮತ್ತು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಅರಣ್ಯ ವಲಯಗಳಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ 3 ವರ್ಷಗಳಿಂದ ಸೋಮವಾರಪೇಟೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಈ ಸಂದರ್ಭ ಎಸಿಎಫ್ ಕೆ.ಎ.ನೆಹರು, ಆರ್ಎಫ್ಒ ಲಕ್ಷ್ಮಿಕಾಂತ್, ಕೊಟ್ರೇಶ್, ಡಿಆರ್ಎಫ್ಒ ಮಹದೇವನಾಯಕ್, ಸತೀಶ್ಕುಮಾರ್, ಚಂದ್ರೇಶ್, ಅರಣ್ಯ ರಕ್ಷಕರು, ವೀಕ್ಷಕರು, ಕಚೇರಿ ಸಹಾಯಕರು ಇದ್ದರು.