ಕುಶಾಲನಗರ, ಜೂ. 1: ಅರಣ್ಯ ಸಂಪತನ್ನು ಉಳಿಸಿ ಬೆಳೆಸುವಲ್ಲಿ ಅರಣ್ಯ ಸಿಬ್ಬಂದಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಮಡಿಕೇರಿ ವಿಭಾಗದ ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜೆ. ಕಾರ್ಯಪ್ಪ ಹೇಳಿದರು

ಗಂಧದಕೋಟಿಯಲ್ಲಿರುವ ಅರಣ್ಯ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ 2018-19 ನೇ ಸಾಲಿನ 2ನೇ ಹಂತದ ಉಪವಲಯ ಅರಣ್ಯಾಧಿಕಾರಿ ಹಾಗೂ ಮೋಜಿಣಿ ದಾರರ ಬುನಾದಿ ತರಬೇತಿ ಶಿಬಿರದ ಘಟಿಕೋತ್ಸವ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.

ಅರಣ್ಯ ರಕ್ಷಣೆ ಅರಣ್ಯ ರಕ್ಷಕನ ಪ್ರಮುಖ ಕರ್ತವ್ಯವಾಗಿದ್ದು, ಗಸ್ತು ಮತ್ತು ನಕ್ಷೆಯನ್ನು ಸಿದ್ಧಪಡಿಸಿಕೊಂಡು ಅರಣ್ಯದ ಬಗ್ಗೆ ಎಚ್ಚರಿಕೆ ವಹಿಸಿದಲ್ಲಿ ಶೇ. 90 ರಷ್ಟು ಅರಣ್ಯ ನಿರ್ವಹಣೆ ಮಾಡಲು ಸಾಧ್ಯ ಎಂದರು.

ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ಮಾತನಾಡಿ, ನೌಕರರು ತಮ್ಮ ಜೀವನದಲ್ಲಿ ನಿರ್ದಿಷ್ಟ ಗುರಿ ಹಾಗೂ ಉತ್ತಮ ಆರೋಗ್ಯವನ್ನು ಹೊಂದುವ ಮೂಲಕ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ತಮ್ಮ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು. ಸರ್ಕಾರಿ ಕೆಲಸ ದೊರಕುವದು ಅದೃಷ್ಟವಾಗಿದ್ದು ಪ್ರತಿಯೊಬ್ಬರು ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಇಲಾಖೆಯಲ್ಲಿ ಇತರರಿಗೆ ಮಾದರಿಯಾಗಬೇಕು ಎಂದರು.

ತಿತಿಮತಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್. ಶ್ರೀಪತಿ ಅವರು ತರಬೇತಿ ಮುಗಿಸಿದ ಶಿಬಿರಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯಲ್ಲಿ ಹೆಚ್ಚಿನ ಕಾಳಜಿ ತೋರುವ ಮೂಲಕ ಪರಿಸರ ಸಮತೋಲನವನ್ನು ಕಾಪಾಡಬೇಕು ಎಂದು ಹೇಳಿದರು. ಅರಣ್ಯ ತರಬೇತಿ ಕೇಂದ್ರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ವಿವಿಧ ವಿಭಾಗದಿಂದ 57 ಉಪ ವಲಯ ಅರಣ್ಯಾಧಿಕಾರಿಗಳ ತರಬೇತಿಗೆ ಹಾಜರಾಗಿದ್ದು, 15 ತಿಂಗಳ ಬುನಾದಿ ತರಬೇತಿಯಲ್ಲಿ ಪಾಠಪ್ರವಚನ ಗಳೊಂದಿಗೆ ದೈಹಿಕ ಮತ್ತು ಮನೋಬಲ ಹೆಚ್ಚಿಸುವ ಶಾರೀರಿಕ ತರಬೇತಿ ನೀಡಲಾಗಿದೆ.

ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಅರಣ್ಯ ಇಲಾಖೆವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ ಎಂದರು.

ಶಿಬಿರಾರ್ಥಿ ಸಿದ್ದಪ್ಪ ಕರ್ಲಾಹಳ್ಳಿ ತಮ್ಮ ಅನುಭವ ವ್ಯಕ್ತಪಡಿಸಿ, ತರಬೇತಿ ಕೇಂದ್ರವೇ ಒಂದು ರೀತಿಯ ಗ್ರಂಥಾಲಯವಿದ್ದಂತೆ. ಎಲ್ಲವನ್ನು ತರಬೇತಿ ಕೇಂದ್ರದಲ್ಲಿ ಕಲಿಯುವ ಅವಕಾಶ ದೊರಕಿದೆ ಎಂದರು.

ಮಡಿಕೇರಿ ಸಾಮಾಜಿಕ ಅರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ. ಸೀಮಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ವೀರಾಜಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಜೆ. ರೋಷಿಣಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಈ ಸಂದರ್ಭ ಸೋಮವಾರ ಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ತರಬೇತಿ ಕೇಂದ್ರದ ವಲಯಾರಣ್ಯಾಧಿಕಾರಿಗಳಾದ ರಾಘವೇಂದ್ರ ಜಿ. ನಾಯಕ್, ಟಿ. ವಿನೂತಾ ಉಪಸ್ಥಿತರಿದ್ದರು. ಶಿಬಿರಾರ್ಥಿ ಶಿವಾನಂದ ಮಳ್ಳಿ ಕಾರ್ಯಕ್ರಮ ನಿರೂಪಿಸಿದರು. ಗಜಾನನ ಬೆಳ್ಳೇರಿ ತಂಡದವರು ಪ್ರಾರ್ಥಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಮೊದಲಿಗೆ ಅರಣ್ಯ ತರಬೇತಿ ಕೇಂದ್ರದ ಮುಂಭಾಗ ಏರ್ಪಡಿಸಿದ್ದ ಪಥ ಸಂಚಲನದಲ್ಲಿ ಮಡಿಕೇರಿ ವಿಭಾಗದ ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜೆ. ಕಾರ್ಯಪ್ಪ ಗೌರವ ವಂದನೆ ಸ್ವೀಕರಿಸಿದರು.