ಮಡಿಕೇರಿ, ಜೂ. 1: ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದೆ ಬಂದಿರುವ 54 ಕುಟುಂಬದ ಪ್ರತಿನಿಧಿಗಳ ಜೊತೆ ಸಮಾಲೋಚನಾ ಸಭೆ ನಡೆಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಮಾತನಾಡಿ, ಪ್ರಕೃತಿ ವಿಕೋಪದಿಂದಾಗಿ ಹಲವು ಕುಟುಂಬಗಳು ಮನೆ ಕಳೆದುಕೊಂಡಿದ್ದು, ಮನೆ ಕಳೆದುಕೊಂಡವರಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಿಸಲಾಗುತ್ತಿದೆ. ಆದರೆ ಕೆಲವು ಕುಟುಂಬಗಳು ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಿದ್ದು, ಅಂತಹ 54 ಕುಟುಂಬಗಳಿಗೆ ಈಗಾಗಲೇ ಜಿಲ್ಲಾಡಳಿತ ಪ್ರಥಮ ಹಂತದಲ್ಲಿ ರೂ. 2 ಲಕ್ಷ ಬಿಡುಗಡೆ ಮಾಡಿದ್ದು, ಮನೆ ಕಾಮಗಾರಿಯನ್ನು 4 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುವಂತೆ ಅವರು ತಿಳಿಸಿದರು.
ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಮಾತನಾಡಿ, ಮನೆಯನ್ನು ಕನಿಷ್ಟ 5.75 ಚದರ ಅಡಿಯಲ್ಲಿ ಮನೆ ನಿರ್ಮಿಸಿಕೊಳ್ಳಬೇಕು. ಫಲಾನುಭವಿಯ ಹೆಸರಿನಲ್ಲಿ ಜಾಗ ಇರಬೇಕು. ಮನೆ ನಿರ್ಮಾಣಕ್ಕೆ ಜಾಗ ಯೋಗ್ಯವಿದೆಯೇ ಎಂಬದನ್ನು ದೃಢೀಕರಿಸಿಕೊಳ್ಳಬೇಕು ಎಂದರು.
ಮನೆ ನಿರ್ಮಾಣಕ್ಕೆ ರೂ. 9.85 ಲಕ್ಷವನ್ನು ನಾಲ್ಕು ಕಂತುಗಳಲ್ಲಿ ನೀಡಲಾಗುವದು. ಮನೆ ಗುಣಮಟ್ಟದಿಂದ ಕೂಡಿರಬೇಕು. ನಿಯಮದಂತೆ ಮನೆ ನಿರ್ಮಾಣ ಮಾಡಬೇಕು. ಮನೆ ನಿರ್ಮಿಸಲು ಗ್ರಾ.ಪಂ. ವತಿಯಿಂದ ಒಂದು ವಾರದಲ್ಲಿ ಅನುಮತಿ ಪತ್ರ ಕೊಡಿಸಲಾಗುವದು ಎಂದು ತಿಳಿಸಿದರು.
ಮನೆ ನಿರ್ಮಾಣದ ಅಳತೆಯು 5.75 ಚದರ ಅಡಿ ವಿಸ್ತೀರ್ಣವನ್ನು ಹೊಂದಿರಬೇಕು, ಕಂದಾಯ ಇಲಾಖೆಯಿಂದ ಫಲಾನುಭವಿಗಳ ದೃಢೀಕರಣ ಪತ್ರವನ್ನು ನೀಡಬೇಕು, ವಾಸ ಯೋಗ್ಯವಾದ ಸ್ಥಳವೆಂದು ಗ್ರಾಮ ಲೆಕ್ಕಿಗರಿಂದ ದೃಢೀಕರಸಿದ ಪತ್ರವನ್ನು ಹೊಂದಿರಬೇಕು, ಜಿಪಿಆರ್‍ಎಸ್ ಆಧಾರಿತವಾದ ಛಾಯಾಚಿತ್ರ ತೆಗೆಯಲಾಗುವದು, ಕಾಮಗಾರಿಗೆ ಹಂತ ಹಂತವಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುವದು. ಅಡಿಪಾಯದ ಕಾಮಗಾರಿಗೆ ರೂ. 2 ಲಕ್ಷ, ಲಿಂಟಲ್ ರೂ. 2 ಲಕ್ಷ ನಂತರ ಮೇಲ್ಛಾವಣಿಗೆ ಮತ್ತು ಉಳಿದ ಮೊತ್ತವನ್ನು ನೀಡಲಾಗುವದು ಎಂದು ಅವರು ತಿಳಿಸಿದರು. ತಹಶೀಲ್ದಾರ್ ಗೋವಿಂದ ರಾಜು, ಕಂದಾಯ ನಿರೀಕ್ಷಕರು, ಸ್ವಂತ ಮನೆ ನಿರ್ಮಿಸಿಕೊಳ್ಳುವ ಫಲಾನುಭವಿಗಳು ಇತರರು ಇದ್ದರು.