ಮಡಿಕೇರಿ, ಜೂ. 1: ಸಂತ್ರಸ್ತರಿಗೆ ನಿರ್ಮಾಣ ಮಾಡಲಾಗುತ್ತಿರುವ ಮನೆಗಳ ಕಾಮಗಾರಿ ಪ್ರಗತಿಯ ಕುರಿತು ಪರಿಶೀಲಿಸಲು ಆಗಮಿಸಿದ್ದ ಕೊಡಗು ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರಿಗೆ ಸಂತ್ರಸ್ತರು ಘೇರಾವೋ ಹಾಕಿದ ಘಟನೆ ನಡೆಯಿತು.ಜಂಬೂರಿಗೆ ಭೇಟಿ ನೀಡಿ ಬಳಿಕ ಕರ್ಣಂಗೇರಿಗೆ ಆಗಮಿಸಿ ಮನೆಗಳ ನಿರ್ಮಾಣ ಪ್ರಗತಿಯ ಬಗ್ಗೆ ಪರಿಶೀಲಿಸಿ ಹಿಂತಿರುಗುವ ವೇಳೆ ಸಂತ್ರಸ್ತರ ಹೋರಾಟ ಸಮಿತಿ, ಕೊಡಗು ಜಿಲ್ಲಾ ಬಿಜೆಪಿ ಹಾಗೂ ಸಂತ್ರಸ್ತ ಗ್ರಾಮಸ್ಥರುಗಳು ವಾಹನವನ್ನು ಮುಖ್ಯ ರಸೆಯಲ್ಲಿ ಅಡ್ಡಗಟ್ಟಿ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಸಾಕಷ್ಟು ಮಂದಿಗೆ ಇನ್ನೂ ಕೂಡ ಸಮರ್ಪಕವಾಗಿ ಪರಿಹಾರ ಲಭಿಸಿಲ್ಲ. ಮಳೆಗಾಲ ಸಮೀಪಿಸಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿರುವ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ಬಾಡಿಗೆ ಹಣವೂ ಸರಿಯಾಗಿ ಸಂದಾಯವಾಗುತ್ತಿಲ್ಲ. ಕೊಡಗಿನ ಸಂತ್ರಸ್ತರಿಗಾಗಿ ಬಂದ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂಬಿತ್ಯಾದಿ ಆರೋಪಗಳೊಂದಿಗೆ ಪ್ರತಿಭಟನಾಕಾರರು ರಾಜ್ಯ ಸರಕಾರ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಈ ವೇಳೆ ಕಾರಿನಿಂದ ಇಳಿದು ಪ್ರತಿಭಟನಾಕಾರರ ಬಳಿಗೆ ಬಂದ ಸಚಿವ ಮಹೇಶ್, ಪ್ರತಿಭಟನಾಕಾರರ ಅಹವಾಲು ಆಲಿಸಲು ಮುಂದಾದರು. ಈ ವೇಳೆಯೂ ಪ್ರತಿಭಟನಾಕಾರರಲ್ಲಿ ಕೆಲವರು ಧಿಕ್ಕಾರ ಕೂಗುತ್ತಲೆ ಇದ್ದುದರಿಂದ ಅಸಮಾಧಾನಗೊಂಡ ಸಚಿವರು ಸಮಸ್ಯೆಗಳ ಬಗ್ಗೆ ಮಾತನಾಡುವದಿದ್ದರೆ ನೇರವಾಗಿ ಮಾತನಾಡಿ, ಅದನ್ನು ಬಿಟು ಇಲ್ಲಸಲ್ಲದ್ದನ್ನು ಹೇಳಬೇಡಿ ಎಂದು ಹೇಳಿದರಲ್ಲದೆ, ಕೊಡಗಿನ ಸಂತ್ರಸ್ತರಿಗೆ ಸರ್ಕಾರ ಶಕ್ತಿಮೀರಿ ಸ್ಪಂದಿಸುತ್ತಿದೆ ಎಂದು ನುಡಿದರು. ಆದರೆ ಕೊಡಗಿನಲ್ಲಿ ಸಾಕಷ್ಟು ಸಮಸ್ಯೆಗಳು ಜೀವಂತವಾಗಿದ್ದು, ಸೂಕ್ತ ಪರಿಹಾರ ಕಲ್ಪಿಸುವ ಅನಿವಾರ್ಯತೆ ಇದೆ ಎಂದು ಪ್ರತಿಭಟನಾಕಾರರು ಸಚಿವರ ಗಮನ ಸೆಳೆದರು. ಪ್ರತಿಭಟನಾಕಾರರ ಮನವಿ ಆಲಿಸಿದ ಸಚಿವ ಸಾ.ರಾ. ಮಹೇಶ್ ತಾ.4ರಂದು ಮಧ್ಯಾಹ್ನ 3 ಗಂಟೆಗೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ನಿಟ್ಟಿನಲ್ಲಿ ಸಭೆ ಏರ್ಪಡಿಸುವದಾಗಿ ತಿಳಿಸಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಎಂ.ಬಿ. ದೇವಯ್ಯ, ಶಾಂತೆಯಂಡ ರವಿಕುಶಾಲಪ್ಪ, ನಾಪಂಡ ರವಿಕಾಳಪ್ಪ, ಜಿ.ಪಂ. ಅಧ್ಯಕ್ಷ ಹರೀಶ್, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಜಿ.ಪಂ. ಹಾಗೂ ತಾ.ಪಂ. ಹಾಗೂ ನಗರಸಭೆಯ ಬಿಜೆಪಿ ಸದಸ್ಯರು, ಮತ್ತಿತರರು ಭಾಗವಹಿಸಿದ್ದರು.

ಶೀಘ್ರ ಮನೆ ಹಸ್ತಾಂತರ: ಸಾ.ರಾ.ಮಹೇಶ್

ಕರ್ಣಂಗೇರಿ, ಮದೆನಾಡು, ಜಂಬೂರು ಗ್ರಾಮಗಳಲ್ಲಿ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮನೆಗಳ ನಿರ್ಮಾಣ ಕಾಮಗಾರಿ ವಿವಿಧ ಹಂತದಲ್ಲಿದ್ದು, ಮನೆಗಳನ್ನು ಶೀಘ್ರ ಸಂತ್ರಸ್ತರಿಗೆ ಹಸ್ತಾಂತರಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಮನೆ ನಿರ್ಮಿಸಲಾಗುತ್ತಿರುವ ಜಂಬೂರು ಮತ್ತು ಕರ್ಣಂಗೇರಿಗೆ ಭೇಟಿ ನೀಡಿ ಮನೆಗಳನ್ನು

(ಮೊದಲ ಪುಟದಿಂದ) ವೀಕ್ಷಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನುಡಿದಂತೆ ನಡೆದಿದ್ದಾರೆ. ಆ ನಿಟ್ಟಿನಲ್ಲಿ 9.85 ಲಕ್ಷ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣ ನಡೆದಿದೆ. ಜೊತೆಗೆ ಬಾಡಿಗೆ ರೂಪದಲ್ಲಿ 10 ಸಾವಿರ ರೂ. ನೀಡಲಾಗುತ್ತಿದೆ ಎಂದರು.

ಸದ್ಯದಲ್ಲೇ ಮುಂಗಾರು ಆರಂಭವಾಗಲಿದೆ. ಆದ್ದರಿಂದ ಶೀಘ್ರ ಮನೆ ಹಸ್ತಾಂತರ ಮಾಡಬೇಕಿದ್ದು, ಸಮಾರೋಪಾದಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವದು ಎಂದು ನುಡಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ. ಸಿಇಒ ಕೆ.ಲಕ್ಷ್ಮಿಪ್ರಿಯಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಡಿವೈಎಸ್‍ಪಿ ಸುಂದರರಾಜ್, ಲೋಕೋಪಯೋಗಿ ಇಲಾಖೆ ಇಇ ಇಬ್ರಾಹಿಂ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಷಂಶುದ್ದೀನ್, ಪೌರಾಯುಕ್ತರಾದ ರಮೇಶ್ ಇತರರು ಇದ್ದರು.