ಮಡಿಕೇರಿ, ಮೇ 31: ನಿನ್ನೆ ತಾನೆ ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು ಇಂದು ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಸಂಜೆ ಪ್ರಥಮ ಸಚಿವ ಸಂಪುಟ ಸಭೆ ನಡೆಸಿದರು. ಸಭೆಯಲ್ಲಿ ರೈತರು ಅಸಂಘಟಿತ ಕಾರ್ಮಿಕರು ಹಾಗೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.

ಇಂದು ನಡೆದ ಪ್ರಥಮ ಸಚಿವ ಸಂಪುಟ ಸಭೆಯಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ವ್ಯಾಪ್ತಿಯನ್ನು ವಿಸ್ತರಣೆ ಮಾಡಲಾಗಿದೆ. ಪ್ರತಿ ವರ್ಷ ರೈತರ ಖಾತೆಗೆ ರೂ. 6 ಸಾವಿರವನ್ನು ನೇರವಾಗಿ ಪಾವತಿ ಮಾಡಲಾಗುತ್ತದೆ. ಈ ಯೋಜನೆಯನ್ನು 15 ಕೋಟಿ ರೈತ ಕುಟುಂಬಗಳಿಗೆ ವಿಸ್ತರಿಸಲಾಗಿದೆ. ಇದರೊಂದಿಗೆ ಕಿಸಾನ್ ಪಿಂಚಣಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. 5 ಕೋಟಿ ರೈತರಿಗೆ ಇದರ ಪ್ರಯೋಜನ ಲಭ್ಯವಾಗಲಿದೆ.

ಇದರೊಂದಿಗೆ ಅಸಂಘಟಿತ ಕಾರ್ಮಿಕರಿಗೂ ನೆರವು ಕಲ್ಪಿಸಲಾಗಿದೆ. ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೊಳ್ಳಲಿದ್ದು, ತಿಂಗಳಿಗೆ ರೂ. 3 ಸಾವಿರ ಪಿಂಚಣಿ ನೀಡಲು ಸಭೆ ಸಮ್ಮತಿ ಸೂಚಿಸಿದೆ.

ರಕ್ಷಕರಿಗೆ ಕೊಡುಗೆ

ದೇಶ ರಕ್ಷಣೆ ಮಾಡುವವರಿಗೆ ಕೊಡುಗೆ ನೀಡಲಾಗಿದೆ. ರಾಷ್ಟ್ರೀಯ ರಕ್ಷಣಾ ನಿಧಿ ವ್ಯಾಪ್ತಿಯಗೆ ಬರುವ ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಕೆಲವು ಮಹತ್ತರ ಬದಲಾವಣೆಗಳನ್ನು ಜಾರಿಗೆ ತರಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಯೋಧರ ಮಕ್ಕಳಿಗೆ ಈ ಹಿಂದೆ ಮಾಸಿಕ 2000 ರೂಪಾಯಿ ಇದ್ದ ವಿದ್ಯಾರ್ಥಿ ವೇತನವನ್ನು ಈಗ ವಿದ್ಯಾರ್ಥಿಗಳಿಗೆ 2,500 ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದರೆ, ವಿದ್ಯಾರ್ಥಿನಿಯರಿಗೆ 2,250 ರಿಂದ 3000 ಕ್ಕೆ ಏರಿಕೆ ಮಾಡಲಾಗಿದೆ.

ಇನ್ನು ವಿದ್ಯಾರ್ಥಿ ವೇತನದ ವ್ಯಾಪ್ತಿಯನ್ನು ನಕ್ಸಲ್ ಹಾಗೂ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ರಾಜ್ಯ ಪೆÇಲೀಸ್ ಅಧಿಕಾರಿಗಳ ಮಕ್ಕಳಿಗೆ ಲಭ್ಯವಾಗುವಂತೆ ವಿಸ್ತರಿಸಲಾಗಿದೆ. ಇದೇ ವೇಳೆ ರಾಜ್ಯ ಪೆÇಲೀಸ್ ಅಧಿಕಾರಿಗಳ ಮಕ್ಕಳಿಗೆ ಹೊಸದಾಗಿ ವಿದ್ಯಾರ್ಥಿ ವೇತನ ಪಡೆಯುವ ಮಿತಿಯನ್ನು ವಾರ್ಷಿಕ 500 ಕ್ಕೆ ನಿಗದಿಪಡಿಸಲಾಗಿದೆ.

ಮೊದಲ ಅಧಿವೇಶನ

ಲೋಕಸಭೆ ಮೊದಲ ಅಧಿವೇಶನ ಜೂನ್ 17 ರಿಂದ ಆರಂಭವಾಗಿ ಜುಲೈ 26 ರವರೆಗೆ ನಡೆಯಲಿದೆ. ಜೂನ್ 20ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದು, ಜುಲೈ 5ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ.

ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ಮನೇಕಾ ಗಾಂಧಿ ಅವರು ಜೂನ್ 17ರಂದು ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಬಳಿಕ ಪೂರ್ಣಾವಧಿ ಸ್ಪೀಕರ್ ನೇಮಕಕ್ಕಾಗಿ ಜೂನ್ 19 ರಂದು ಸ್ಪೀಕರ್ ಚುನಾವಣೆ ನಡೆಯಲಿದೆ.