ಭಾಗಮಂಡಲ, ಮೇ 31: ತಲಕಾವೇರಿ ವನ್ಯಜೀವಿ ವಲಯ ವ್ಯಾಪ್ತಿಗೆ ಒಳಪಡುವ ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶವನ್ನು ಮೋಜಣಿ ಮಾಡಿ ಗಡಿ ಗುರುತಿಸಿ ಹದ್ದು ಬಸ್ತು ಮಾಡುವ ಕಾರ್ಯಯೋಜನೆ ಕೆಲಸ ಶುಕ್ರವಾರ ನಡೆಯುತ್ತಿದ್ದಾಗ ಭಾಗಮಂಡಲ ವ್ಯಾಪ್ತಿಯ ತಣ್ಣಿಮಾನಿ ಗ್ರಾಮದಲ್ಲಿ ಸಾರ್ವಜನಿಕರು ಪ್ರತಿರೋಧ ಒಡ್ಡಿ ಡಿಜಿಟಲ್ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.

ಈ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯ ನಡೆಯುತ್ತಿದ್ದು ಕೆಲವು ದಿನಗಳಿಂದ ಅರಣ್ಯ ಇಲಾಖೆ ಗಡಿ ಗುರುತಿಸಿ ಪಿಲ್ಲರ್ ಅಳವಡಿಸುವ ಕಾರ್ಯವನ್ನು ಮಾಡುತ್ತಿದೆ. ತಣ್ಣಿಮಾನಿ ಗ್ರಾಮದ ಜನವಸತಿ ಪ್ರದೇಶಕ್ಕೆ ಬಂದಾಗ ಗ್ರಾಮಸ್ಥರು ತಕರಾರು ತೆಗೆದರು. ನೂರು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆ ಗಡಿ ಗುರುತಿಸಿ ಹದ್ದುಬಸ್ತು ಕಾರ್ಯ ಮಾಡಿದೆ. ಇಪ್ಪತ್ತು ವರ್ಷದ ಹಿಂದೆ ಸೋಲಾರ್ ಬೇಲಿ ಅಳವಡಿಸಿದೆ. ಆದರೆ ಏಕಾಏಕಿ ಸಾರ್ವಜನಿಕರ ಗಮನಕ್ಕೆ ತಾರದೆ ಸದ್ದಿಲ್ಲದೆ ಜನವಸತಿ ಪ್ರದೇಶದ ಮೂವತ್ತು ಎಕರೆ ಜಾಗದ ಸರ್ವೇ ಕಾರ್ಯಕ್ಕೆ ಮುಂದಾದಾಗ ಗ್ರಾಮಸ್ಥರು ತಡೆಯೊಡ್ಡಿ ಯಾವದೇ ಕಾರಣಕ್ಕೆ ಸರ್ವೇ ಕಾರ್ಯಕ್ಕೆ ಅವಕಾಶ ಕಲ್ಪಿಸುವದಿಲ್ಲ ಎಂದರು. ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ಜಾಗದ ದಾಖಲಾತಿ ಹಾಜರಿಪಡಿಸಿ ಎಂದು ಆಗ್ರಹಿಸಿದಾಗ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡು ನೂರು ವರ್ಷಗಳ ಹಿಂದೆಯೇ ಸರ್ವೇ ಕಾರ್ಯ ನಡೆದಿದೆ. ಸಕಾಲದಲ್ಲಿ ಕಂದಾಯ ಪಾವತಿಸುತ್ತಿದ್ದೇವೆ. ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ನೊಟೀಸು ನೀಡದೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಸರ್ವೇ ಮಾಡುತ್ತಿದ್ದುದಕ್ಕೆ ತಡೆ ಒಡ್ಡಿದರು. ರೆವಿನ್ಯೂ ಸರ್ವೇ ಆಗಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಾಗ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿದರು.

ಬಿಜೆಪಿ ಎಸ್‍ಡಿ ಮೋರ್ಚಾದ ಅಧ್ಯಕ್ಷ ಮಿಟ್ಟು ರಂಜಿತ್ ಮಾತನಾಡಿ ಹಲವು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆ ಗಡಿ ಭಾಗ ಗುರುತಿಸಿ ಪಿಲ್ಲರ್ ನೆಟ್ಟು ಸೋಲಾರ್ ಬೇಲಿ ಅಳವಡಿಸಿಕೊಂಡು ತನ್ನ ಜಾಗವನ್ನು ಗುರುತಿಸಿಕೊಂಡಿದೆ. ರಸ್ತೆ ಸೇರಿದಂತೆ ಜನವಸತಿ ಪ್ರದೇಶದ ಸ್ಥಳದ ಸರ್ವೇ ಮಾಡಲು ಯಾವದೇ ಕಾರಣಕ್ಕೂ ಬಿಡುವದಿಲ್ಲ. ಬುಡಕಟ್ಟು ಜನಾಂಗದವರಿಗೂ ಇದರಿಂದ ಸಮಸ್ಯೆ ಆಗುತ್ತಿದೆ ಎಂದರು. ಗ್ರಾಮ ಪಂಚಾಯಿತಿ ಸದಸ್ಯ ಭಾಸ್ಕರ್ ಮಾತನಾಡಿ ಜನಸಾಮಾನ್ಯರ ಜಾಗದ ಅತಿಕ್ರಮಣದಿಂದ ಬದುಕಿಗೆ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆಯ ಸರ್ವೇ ಕಾರ್ಯಕ್ಕೆ ಅವಕಾಶ ಕಲ್ಪಿಸುವದಿಲ್ಲ ಎಂದರು. ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ಪ್ರತಿಕ್ರಿಯಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಂದಾಯ ಇಲಾಖೆಯ ಮರು ಸರ್ವೆ ನಡೆಸಲಾಗುವದು ಎಂದರು. ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.