ವೀರಾಜಪೇಟೆ, ಮೇ 31: ವಿಧವೆ ಮಹಿಳೆಯ ಬಳಿಯಲ್ಲಿದ್ದ ನಗದು ಹಣ ಹಾಗೂ ಚಿನ್ನಾಭರಣವನ್ನು ದೋಚುವ ಸಲುವಾಗಿ ತಲೆಗೆ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಿದ ಆರೋಪದ ಮೇರೆ ಕೇರಳ ಮೂಲದ ಅನೀಶ್ ಅಲಿಯಾಸ್ ಅನಿಚ್ಚು (23) ಎಂಬಾತನಿಗೆ ಇಲ್ಲಿನ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಜೀವಾವಧಿ ಶಿಕ್ಷೆ ಹಾಗೂ ರೂ 50,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ತಾ. 20.10.2017ರಂದು ಶ್ರೀಮಂಗಲ ಬಳಿಯ ಬಾಡಗರಕೇರಿಯ ವಿಜಯಕುಮಾರ್ ಎಂಬವರ ಕಾಫಿ ತೋಟದಲ್ಲಿ ಕೆಲಸಕ್ಕಿದ್ದ ನಾಪೋಕ್ಲುವಿನ ಕೊಳಕೇರಿಯ ನಿವಾಸಿ ಹಮೀದ್ ಎಂಬವರ ಮಗ ಅನೀಶ್ ರಾತ್ರಿ ತೋಟದ ಮನೆಯಲ್ಲಿ ಮಲಗಿದ್ದ ದಿವಂಗತ ಪಳನಿಸ್ವಾಮಿ ಎಂಬವರ ಪತ್ನಿ ಸುಂದರಮ್ಮ (46) ಎಂಬಾಕೆಯ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿರುವ ನಗದು ಹಣ ಹಾಗೂ ಚಿನ್ನಾಭರಣಗಳನ್ನು ದೋಚಲು ಪ್ರಯತ್ನಿಸಿ ವಿಫಲವಾದಾಗ ಎಚ್ಚರಗೊಂಡ ಸುಂದರಮ್ಮನ ತಲೆಗೆ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಿದ್ದ ಆಕೆಯ ಬಳಿಯಿದ್ದ ಮೊಬೈಲ್‍ಲನ್ನು ತೆಗೆದುಕೊಂಡು ಕೇರಳಕ್ಕೆ ತೆರಳಿದ್ದಾನೆಂದೂ ಸುಂದರಮ್ಮನ ಮಗ ಪಿ.ಎಸ್.ಶಂಭು ಶ್ರೀಮಂಗಲ ಪೊಲೀಸರಿಗೆ ದೂರು ನೀಡಿದ್ದನು. ಪೊಲೀಸರು ದೂರಿನ ಆಧಾರದ ಮೇಲೆ ಅನೀಶ್ ವಿರುದ್ಧ ಐ.ಪಿ.ಸಿ. 302, 450 ಹಾಗೂ 201 ಪ್ರಕಾರ ಪ್ರಕರಣ ದಾಖಲಿಸಿದ್ದರು.

ಶ್ರೀಮಂಗಲ ಪೊಲೀಸರು ಕೊಲೆ ಪ್ರಕರಣವನ್ನು ಭೇದಿಸಲು ತಂಡವನ್ನು ರಚಿಸಿ ತನಿಖೆ ನಡೆಸಿದಾಗ ಈತ ಕೇರಳದ ಕ್ಯಾಲಿಕಟ್‍ನ ಕೂಲ್‍ಬಾರ್‍ನಲ್ಲಿ ಕೆಲಸಕ್ಕಿದ್ದವನನ್ನು ಪತ್ತೆಹಚ್ಚಿ ತಾ. 8.12.2017ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.

ಈ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಐ.ಪಿ.ಸಿ.302ಕ್ಕೆ ಜೀವಾವಧಿ ಶಿಕ್ಷೆ ಹಾಗೂ ರೂ 50,000 ದಂಡ, ದಂಡ ಪಾವತಿಗೆ ತಪ್ಪಿದರೆ ಎರಡು ವರ್ಷ ಸಜೆ, ಐ.ಪಿ.ಸಿ. 450 ರ ಪ್ರಕಾರ ಮೂರು ವರ್ಷ ಸಜೆ ರೂ.5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರ ಅಭಿಯೋಜಕರಾದ ಡಿ.ನಾರಾಯಣ ವಾದಿಸಿದರು.