ಗೋಣಿಕೊಪ್ಪಲು, ಮೇ 31: ಮಧ್ಯರಾತ್ರಿ ಮನೆಯೊಳಗೆ ಸುಖ ನಿದ್ದೆಯಲ್ಲಿದ್ದಾಗ ಪಕ್ಕದ ತೋಟದ ಮರವೊಂದರ ಕೊಂಬೆ ಗಾಳಿ-ಮಳೆಯ ರಭಸಕ್ಕೆ ಮುರಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಪತಿ ಹಾಗೂ ಪುಟ್ಟ ಮಗು ಪ್ರಾಣಾಪಾಯದಿಂದ ಪಾರಾಗಿರುವ ದುರ್ಘಟನೆ ದೇವರಪುರ ಗ್ರಾ.ಪಂ. ವ್ಯಾಪ್ತಿಯ ತಾರಿಕಟ್ಟೆ ಎಂಬಲ್ಲಿ ಸಂಭವಿಸಿದೆ. ಮನೆಯಲ್ಲಿ ಮಲಗಿದ್ದ ರೈಯಾಹಾನತ್ (22) ಎಂಬಾಕೆಯೇ ಮೃತ ದುರ್ದೈವಿ.
ಮನೆ ಸಮೀಪವಿದ್ದ ಬೃಹತ್ ಗಾತ್ರದ ಮರದ ಕೊಂಬೆಯು ಮನೆಯ ಮೇಲೆ ಬಿದ್ದ ಪರಿಣಾಮ ಸುಖ ನಿದ್ರೆಯಲ್ಲಿದ್ದ ನೌಶದ್ ಎಂಬವರ ಪತ್ನಿ ರೈಯಾಹಾನತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ನೌಶದ್‍ನ ಬಲಗೈಗೆ ಪೆಟ್ಟಾಗಿದ್ದು ಅದೃಷ್ಟವಶಾತ್ ಪುಟ್ಟ ಕಂದಮ್ಮ ಮಹಮ್ಮದ್ ನಜûಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ದೇವರಪುರ ಪಂಚಾಯಿತಿ ವ್ಯಾಪ್ತಿಯ ಅಬ್ಬೂರು ತಾರಿಕಟ್ಟೆಯಲ್ಲಿ ಘಟನೆ ನಡೆದಿದೆ. ಶುಕ್ರವಾರ ಮಧ್ಯರಾತ್ರಿ 1.15ರ ಸಮಯದಲ್ಲಿ ಬೀಸಿದ ಭಾರಿ ಮಳೆಗಾಳಿಗೆ ಮನೆಯ ಸಮೀಪವಿದ್ದ ಆಜೀರ ಉತ್ತಯ್ಯ ಎಂಬವರ ಕಾಫಿ ತೋಟದ ಕಾಡು ಮರದ ದೊಡ್ಡ ಕೊಂಬೆಯು ಮರದ ಮಧ್ಯಭಾಗದಿಂದ ಸೀಳಿಕೊಂಡು ಸಮೀಪದಲ್ಲಿ ವಾಸವಿದ್ದ ನೌಶದ್‍ನ ಮನೆಯ ಮೇಲೆ ಬಿದ್ದಿದೆ. ಮರವು ಬಿದ್ದ ರಭಸಕ್ಕೆ ಮನೆಯು ಸಂಪೂರ್ಣ ಜಖಂಗೊಂಡಿದ್ದು, ಮನೆಗೆ ಹಾಕಲಾಗಿದ್ದ ಕೌಕೋಲು, ಮುರಿದು ಕೋಣೆಯಲ್ಲಿ ಗಾಡ ನಿದ್ರೆಯಲ್ಲಿದ್ದ ನೌಶದ್‍ನ ಪತ್ನಿ ರೈಯಾಹಾನತ್ ಎದೆ ಭಾಗಕ್ಕೆ ಘಾಸಿಗೊಳಿಸಿದೆ. ಈ ಘಟನೆಯಿಂದ ರೈಯಾಹಾನತ್ ಬೆಚ್ಚಿ ಬಿದ್ದು ಚೀರಿ ಕೊಂಡಿದ್ದಾಳೆ. ಜೊತೆಯಲ್ಲೇ ಮಲಗಿದ್ದ ಪತಿ ನೌಶದ್ ಎದ್ದು ನೋಡುವಷ್ಟರಲ್ಲಿ ಪತ್ನಿ ನರಳಾಡುತ್ತಿರುವದು ತಿಳಿದು ಸಮೀಪದ ಮನೆಯವರ ಸಹಾಯ ಪಡೆದು ಕೂಡಲೇ ಗೋಣಿಕೊಪ್ಪಲು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರಾದರೂ ಎದೆಯ ಭಾಗಕ್ಕೆ ಮಾರಣಾಂತಿಕವಾಗಿ ಘಾಸಿಯಾದ್ದರಿಂದ ಆಕೆಯನ್ನು ಉಳಿಸಲು ಸಾಧ್ಯವಾಗಲಿಲ್ಲ.
ಇದೀಗ ನೌಶದ್ ತನ್ನ ಪತ್ನಿ ಹಾಗೂ ಮನೆಯನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಗೋಳಾಡು ತ್ತಿರುವದು ಹೃದಯ ಕಲಕುವಂತಿತ್ತು. ಒಂದೂವರೆ ವರ್ಷದ ಪುಟ್ಟ ಕಂದಮ್ಮ ಮಾತ್ರ ಸಂಬಂಧಿಕರ ಬಳಿ ಏನೂ ಅರಿಯದೆ ಕಾಲ ಕಳೆಯುತ್ತಿದೆ. ಪ್ರಸ್ತುತ ಮುಂಗಾರಿನ ಮಳೆ, ಗಾಳಿಗೆ ಮೊದಲ ಬಲಿ ತೆಗೆದುಕೊಂಡ ಘಟನೆ ಇದಾಗಿದ್ದು ಮನೆಯು ಸಂಪೂರ್ಣ ಜಖಂಗೊಂಡಿದೆ.
ಸುದ್ದಿ ತಿಳಿಯುತ್ತಿದ್ದಂತೆ ನೌಶದ್‍ನ ಮನೆಗೆ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ಘಟನೆಯನ್ನು ವೀಕ್ಷಿಸಿದರು. ಮನೆ, ಪತ್ನಿಯನ್ನು ಕಳೆದುಕೊಂಡ ನೌಶದ್ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ತಾ,ಪಂ. ಸದಸ್ಯೆ ಆಶಾಜೇಮ್ಸ್ ಹಾಗೂ ಮಾಯಮುಡಿಯ ಅಬ್ದುಲ್ ರೆಹಮಾನ್, ಮಾಜಿ ತಾ.ಪಂ. ಸದಸ್ಯ ಟಾಟೂ ಮೊಣ್ಣಪ್ಪ, ಸ್ಥಳದಲ್ಲೇ ಮರಣೊತ್ತರ ಪರೀಕ್ಷೆ ನಡೆಸಲು ಮನವಿ ಮಾಡಿದರು. ಠಾಣಾಧಿಕಾರಿ ಮಹೇಶ್ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುರೇಶ್ ಅವರನ್ನು ಬರಮಾಡಿಕೊಂಡು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದರು.
ಸ್ಥಳಕ್ಕೆ ಪೊನ್ನಂಪೇಟೆ ರೆವಿನ್ಯೂ ಅಧಿಕಾರಿ ರಾಧಕೃಷ್ಣ ಹಾಗೂ ಅಮ್ಮತ್ತಿ ಕಂದಾಯ ಪರಿವೀಕ್ಷಕ ಅನೀಲ್, ತಹಶೀಲ್ದಾರ್ ಗೋವಿಂದರಾಜು ಹಾಗೂ ಜಿಲ್ಲಾಧಿಕಾರಿಗಳಿಗೆ ವಿವರ ನೀಡಿದರು.
ತಹಶೀಲ್ದಾರ್ ಗೋವಿಂದರಾಜ್ ಆಗಮಿಸುತ್ತಿದ್ದಂತೆಯೇ ಇವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಪಂಚಾಯಿತಿ ನಿರ್ಲಕ್ಷ್ಯದ ಬಗ್ಗೆ ಪಿಡಿಒ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದರು. ಗ್ರಾಮಸ್ಥರ ಮಾತಿಗೆ ಉತ್ತರಿಸಿದ ಗೋವಿಂದರಾಜು ಪರಿಹಾರ ವಿತರಣೆಯಲ್ಲಿ ಯಾವದೇ ತಾರತಮ್ಯ ಮಾಡುವದಿಲ್ಲ. ಅಗತ್ಯ ಕಾಗದ ಪತ್ರಗಳು ಸಿಕ್ಕಿದ ತಕ್ಷಣ ಪರಿಹಾರ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವದು ಎಂದು ಉತ್ತರಿಸಿದರು. ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮರಣ್ಣೋತ್ತರ ಪರೀಕ್ಷೆಗೆ ಅವಕಾಶ ನೀಡುವದಿಲ್ಲ ಎಂದು ಪಟ್ಟು ಹಿಡಿದರು. ಈ ಘಟನೆಯಿಂದ ತಹಶೀಲ್ದಾರ್ ಗೋವಿಂದರಾಜ್, ಠಾಣಾಧಿಕಾರಿ ಮಹೇಶ್ ಗ್ರಾಮಸ್ಥರನ್ನು ಸಮಾಧಾನಿಸಿದರು.
ಮನೆಗೆ ಅಪಾಯ ತರುವ ಮರಗಳನ್ನು ತೆರವುಗೊಳಿಸಲು ಯಾವದೇ ಸಮಸ್ಯೆ ಇಲ್ಲ. ಈ ಬಗ್ಗೆ ಪಂಚಾಯಿತಿ ಅರ್ಜಿ ಸಲ್ಲಿಸಿದ್ದಲ್ಲಿ ಮರ ತೆರವಿಗೆ ತಕ್ಷಣವೇ ಇಲಾಖೆಯಿಂದ ಅನುಮತಿ ನೀಡುವದಾಗಿ ತಿತಿಮತಿ ಅರಣ್ಯ ಇಲಾಖೆಯ ಆರ್‍ಎಫ್‍ಓ ಅಶೋಕ್ ಮಾಹಿತಿ ಒದಗಿಸಿದರು.