ಕುಶಾಲನಗರ, ಮೇ 31: ಕುಶಾಲನಗರ ಖಾಸಗಿ ಬಸ್ ನಿಲ್ದಾಣದಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮೂಲಕ ಮುಖ್ಯರಸ್ತೆಗೆ ಸಂಪರ್ಕ ರಸ್ತೆ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗಾಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಮನವಿ ಸಲ್ಲಿಸಿದ ಸಂದರ್ಭ ಈ ಭರವಸೆ ನೀಡಿದ್ದಾರೆ.
ಕುಶಾಲನಗರ ಖಾಸಗಿ ಬಸ್ ನಿಲ್ದಾಣಕ್ಕೆ ಸಂಪರ್ಕ ರಸ್ತೆ ಸಮಸ್ಯೆ ತಲೆದೋರಿದ್ದು ತಾತ್ಕಾಲಿಕವಾಗಿ ಸರಕಾರಿ ಬಸ್ ನಿಲ್ದಾಣ ಮೂಲಕ ಮುಖ್ಯರಸ್ತೆಗೆ ತೆರಳಲು ಕ್ರಮಕ್ಕೆ ಚಿಂತನೆ ಹರಿಸಲಾಗಿದೆ ಎಂದು ಮುಖ್ಯಾಧಿಕಾರಿ ಸುಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸರಕಾರಿ ಬಸ್ ನಿಲ್ದಾಣದ ಒಂದು ಬದಿಯಲ್ಲಿ ಕಳೆದ ಬಾರಿಯ ಮಳೆಗೆ ತಡೆಗೋಡೆ ಕುಸಿದು ಬಿದ್ದಿದ್ದು, ಪಕ್ಕದ ಹೊಟೇಲ್ ಮತ್ತಿತರ ವ್ಯಾಪ್ತಿಯಿಂದ ಕಲುಷಿತ ತ್ಯಾಜ್ಯ ನಿಲ್ದಾಣದ ಒಳಭಾಗದಲ್ಲಿ ಹರಿಯುತ್ತಿದ್ದು ಇದರ ಬಗ್ಗೆ ಪಂಚಾಯ್ತಿ ವತಿಯಿಂದ ತಡೆಗೋಡೆ ನಿರ್ಮಿಸುವಂತೆ ದೀಪಕ್ ಕುಮಾರ್ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಕೋರಿದರು.
ಈ ಸಂದರ್ಭ ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿ ಮುರಳೀಧರ್, ಸ್ಥಳೀಯ ಅಧಿಕಾರಿಗಳು ಇದ್ದರು.