ನವದೆಹಲಿ, ಮೇ 31: 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಭಾರತದ ಭವಿಷ್ಯದ ಭರವಸೆಯ ಹರಿಕಾರ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ನೂತನ ಸಂಪುಟದ ಸಚಿವರುಗಳಿಗೆ ಇಂದು ಖಾತೆ ಹಂಚಿಕೆ ಮಾಡಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ನೂತನ ಸಂಪುಟಕ್ಕೆ ಅಂಕಿತ ಹಾಕಿದ್ದಾರೆ. ನಿರೀಕ್ಷೆಯಂತೆ ಕೇಂದ್ರ ಗೃಹ ಖಾತೆ ಹಾಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪಾಲಾಗಿದ್ದು, ಮಾಜಿ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಹತ್ತರವಾದ ರಕ್ಷಣಾ ಖಾತೆಯ ಜವಾಬ್ದಾರಿ ವಹಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹಿಂದಿನ ಸರಕಾರದಲ್ಲಿ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ನಿವೃತ್ತಿ ಪಡೆದಿರುವ ಮೇರೆಗೆ ಈ ಜವಾಬ್ದಾರಿಯನ್ನು ಮಾಜಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಹಿಸಲಾಗಿದೆ. ಈ ಹಿಂದೆ ದೇಶದ ಪ್ರಥಮ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುವದರೊಂದಿಗೆ ಇದೀಗ ವಿತ್ತಖಾತೆಯನ್ನು ಹೊಂದುವದ ರೊಂದಿಗೆ ಭಾರತದ ಪ್ರಥಮ ಅರ್ಥ ಸಚಿವೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಲ್ಲದೆ ದಿ. ಅನಂತ್‍ಕುಮಾರ್ ಅವರು ಹೊಂದಿದ್ದ ಹಿಂದಿನ ಸರಕಾರದ ಜವಾಬ್ದಾರಿ ಗಳನ್ನು ನೂತನ ಸಂಪುಟದಲ್ಲಿ ಕರ್ನಾಟಕದ ಇಬ್ಬರು ಸಂಸದರಿಗೆ ಹಂಚಿಕೆ ಮಾಡಲಾಗಿದೆ.ಎನ್‍ಡಿಎ ಸರ್ಕಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರಿಗೆ ಮೋದಿ (ಮೊದಲ ಪುಟದಿಂದ) ಕ್ಯಾಬಿನೆಟ್‍ನಲ್ಲಿ 2ನೇ ಸ್ಥಾನ ನೀಡಲಾಗಿದ್ದು, ಅವರಿಗೆ ಗೃಹಖಾತೆ ನೀಡಲಾಗಿದೆ. ಅಂತೆಯೇ ಈ ಹಿಂದೆ ಗೃಹಖಾತೆ ನಿರ್ವಹಣೆ ಮಾಡಿದ್ದ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಇಲಾಖೆಯ ಜವಾಬ್ದಾರಿ ನೀಡಲಾಗಿದ್ದು, ರಕ್ಷಣಾ ಇಲಾಖೆಯನ್ನು ನಿರ್ವಹಿಸಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ವಿತ್ತ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಆ ಪ್ರಕಾರ ಡಿ.ವಿ. ಸದಾನಂದಗೌಡ ಅವರು ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ನೂತನ ಸಂಪುಟದಲ್ಲಿ ಹೊಂದಿದ್ದಾರೆ. ಪ್ರಸಕ್ತ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಅವರು ಮಹತ್ವರವಾದ ಸಂಸದೀಯ ವ್ಯವಹಾರ ಖಾತೆಯ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಇನ್ನು ಕರ್ನಾಟಕದಿಂದ ರಾಜ್ಯಸಚಿವರಾಗಿ ಸೇರ್ಪಡೆಗೊಂಡಿರುವ ಬೆಳಗಾವಿ ಸಂಸದ ಸುರೇಶ್ ಸಿ. ಅಂಗಡಿ ಅವರಿಗೆ ರೈಲ್ವೆ ಖಾತೆಯನ್ನು ನೀಡಲಾಗಿದೆ. ಭವಿಷ್ಯದಲ್ಲಿ ಕೊಡಗು - ಮೈಸೂರು ರೈಲ್ವೆ ಯೋಜನೆ ಅನುಷ್ಠಾನಕ್ಕೆ ಈ ಹಿಂದೆ ಚಾಲನೆ ನೀಡಿದ್ದ ನಮ್ಮ ಕೊಡಗಿನ ಅಳಿಯ, ಹಾಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ಸುರೇಶ್ ಅಂಗಡಿ ಹೆಚ್ಚಿನ ಒತ್ತು ನೀಡುವ ಆಶಯವನ್ನು ಈ ಮೂಲಕ ಹೊಂದಲಾಗಿದೆ.

ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟ ಸೇರಿರುವ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರಿಗೆ ನಿರೀಕ್ಷೆಯಂತೆ ಹಿಂದಿನ ಸಚಿವೆ ಸುಷ್ಮಾ ಸ್ವರಾಜ್ ಅವರಿಂದ ತೆರವುಗೊಂಡಿರುವ ವಿದೇಶಾಂಗ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ .

ನೂತನ ಸಂಪುಟದಲ್ಲಿ ಸಚಿವರುಗಳಿಗೆ ಹೊಣೆಗಾರಿಕೆಗಳನ್ನು ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಹಿಡಿತದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ಇರಿಸಿಕೊಂಡಿದ್ದಾರೆ. ಈ ಪ್ರಕಾರ ಅವರು ಹೊಂದಿರುವ ಖಾತೆಗಳಲ್ಲಿ ದೇಶದ ಪರಮಾಣು ಶಕ್ತಿ, ಬಾಹ್ಯಾಕಾಶ ಇಲಾಖೆಯೊಂದಿಗೆ ಇನ್ನಷ್ಟು ಹಂಚಿಕೆಯಾಗದ ಇಲಾಖೆಗಳನ್ನು ನೋಡಿಕೊಳ್ಳಲಿದ್ದಾರೆ. ಉಳಿದಂತೆ ಸಚಿವರ ಖಾತೆ ಹಂಚಿಕೆ ವಿವರ ಈ ಕೆಳಗಿನಂತಿದೆ.