ಸಿದ್ದಾಪುರ, ಮೇ 31: ನೆಲ್ಯಹುದಿಕೇರಿ ಅಭ್ಯತ್‍ಮಂಗಲ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡಿನ ಪೈಕಿ ಉಪಟಳ ನೀಡುತ್ತಿರುವ ಒಂಟಿ ಸಲಗವೊಂದನ್ನು ಸೆರೆ ಹಿಡಿಯಲು ಮುಂದಾಗಿದ್ದ ಅರಣ್ಯ ಇಲಾಖೆ ಸಲಗ ಪತ್ತೆಯಾಗದ ಹಿನ್ನೆಲೆ ಕಾರ್ಯಾಚರಣೆ ಮುಂದೂಡಿದೆ.

ನೆಲ್ಯಹುದಿಕೇರಿಯ ಮೇರಿ ಲ್ಯಾಂಡ್ ಕಾಫಿ ತೋಟದ ಒಳಗೆ 25 ಕ್ಕೂ ಅಧಿಕ ಕಾಡಾನೆಗಳು ಬೀಡು ಬಿಟ್ಟಿದ್ದು, ಈ ಪೈಕಿ ಜನರಿಗೆ ಹಾಗೂ ಮನೆಗಳ ಬಳಿ ಉಪಟಳ ನೀಡುತ್ತಿದ್ದ ಪುಂಡಾನೆಯೊಂದನ್ನು ನಾಲ್ಕು ದಿನಗಳ ಹಿಂದೆ ಅರಣ್ಯ ಇಲಾಖೆ ಸೆರೆ ಹಿಡಿದಿತ್ತು. ನಂತರ ಗ್ರಾಮಸ್ಥರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಮನವಿಯ ಮೇರೆಗೆ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಶುಕ್ರವಾರ ಮೇರಿ ಲ್ಯಾಂಡ್ ಕಾಫಿ ತೋಟದ ಒಳಗೆ 8 ಸಾಕಾನೆಗಳೊಂದಿಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಬೆಳಿಗ್ಗೆ 10.30 ಕ್ಕೆ ಸಾಕಾನೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್ ರಹಮಾನ್ ನೇತೃತ್ವದ ತಂಡವು ಮೇರಿ ಲ್ಯಾಂಡ್ ಕಾಫಿ ತೋಟದಲ್ಲಿ ಕಾರ್ಯಾಚರಣೆಗೆ ಮುಂದಾಯಿತು. ಈ ಸಂದರ್ಭ ತೋಟದ ಒಳಗೆ ಒಂದು ಗುಂಪಿನಲ್ಲಿ ಮರಿ ಆನೆ ಸೇರಿದಂತೆ 17 ಕಾಡಾನೆಗಳು ಪತ್ತೆಯಾದವು. ಈ ಗುಂಪಿನಲ್ಲಿ ಉಪಟಳ ನೀಡುತ್ತಿದ್ದ ಒಂಟಿ ಸಲಗವು ಪತ್ತೆಯಾಗಲಿಲ್ಲ. ನಂತರ ಕಾಫಿ ತೋಟದ ಇನ್ನೊಂದು ಬಾಗದಲ್ಲಿ ಕಾರ್ಯಾಚರಣೆ ನಡೆಸಿದಾಗ 7 ಕಾಡಾನೆಗಳು ಇರುವ ಗುಂಪು ಕಂಡು ಬಂದಿತು. ಅಲ್ಲಿಯೂ ಒಂಟಿ ಸಲಗ ಪತ್ತೆಯಾಗಲಿಲ್ಲ.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಜೂನ್ 1ರಂದು ಮುಂದೂಡಲಾಯಿತು. ಇತ್ತೀಚೆಗೆ ಪುಂಡಾನೆಯನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಕಂಡುಬಂದಿದ್ದ ಒಂಟಿ ಸಲಗವು ಗಾಬರಿಯಿಂದ ಬೇರೆಡೆ ತೆರಳಿರಬಹುದು ಎಂದು ಕಾರ್ಯಾಚರಣೆ ತಂಡ ಶಂಕೆ ವ್ಯಕ್ತಪಡಿಸಿದೆ. ಸತತ ನಾಲ್ಕು ಗಂಟೆಗಳ ಕಾಲ ಕಾಫಿ ತೋಟದ ಒಳಗೆ ಕಾರ್ಯಾಚರಣೆ ತಂಡಕ್ಕೆ ಒಂಟಿ ಸಲಗವು ಪತ್ತೆಯಾಗದ ಹಿನ್ನೆಲೆ ಮದ್ಯಾಹ್ನದ ನಂತರ ಎರಡು ತಂಡಗಳನ್ನು ರಚನೆ ಮಾಡಿ ಒಂಟಿ ಸಲಗ ಇರುವ ಜಾಗವನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಯಿತು. ಇದೀಗ ಒಂಟಿ ಸಲಗವನ್ನು ಪತ್ತೆ ಹಚ್ಚುವದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ವಲಯ ಅರಣ್ಯಾಧಿಕಾರಿ ಅರುಣ, ಉಪ ವಲಯ ಅರಣ್ಯಾಧಿಕಾರಿ ವಿಲಾಸ್ ಗೌಡ, ರಂಜನ್ ಸೇರಿದಂತೆ 70 ಸಿಬ್ಬಂದಿ ಪಾಲ್ಗೊಂಡಿದ್ದರು.

ಕಾರ್ಯಾಚರಣೆಯಲ್ಲಿ ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ಕೃಷ್ಣ ದುಬಾರೆ ಸಾಕಾನೆ ಶಿಬಿರದ ಲಕ್ಷ್ಮಣ, ಹರ್ಷ, ಅಜ್ಜಯ್ಯ, ವಿಕ್ರಂ, ಧನಂಜಯ, ಈಶ್ವರ, ಪಾಲ್ಗೊಂಡಿವೆ.