ಸಿದ್ದಾಪುರ ಮೇ 31: ಸಿದ್ದಾಪುರದ ಇವಾಲ್ವ್ ಬ್ಯಾಕ್ ರೆಸಾರ್ಟ್ ವತಿಯಿಂದ ಕರಡಿಗೋಡು ಗ್ರಾಮದ ಬಡ ಮಕ್ಕಳಿಗೆ ಉಚಿತ ಆಂಗ್ಲ ಪ್ರಾಥಮಿಕ ಶಾಲೆಯಾದ ಮಾರ್ನಿಂಗ್ ಗ್ಲೋರಿ ಎಂಬ ಹೆಸರಿನ ಶಾಲೆಯನ್ನು ಉದ್ಘಾಟಿಸಲಾಯಿತ್ತು.

ಉದ್ಘಾಟನೆಯನ್ನು ಇವಾಲ್ವ್ ಬ್ಯಾಕ್ ಸಂಸ್ಥೆಯ ಇಮ್ಯಾನ್ಯುಲ್ ಟಿ ರಾಮಪುರಂ ಕುಟ್ಟಪ್ಪನ್ ಹಾಗೂ ಶೀಲಾ ರಾಮಪುರಂ ನೆರವೇರಿಸಿದರು.

ನಂತರ ಮಾತನಾಡಿದ ಅವರು, ತಮ್ಮ ಸಂಸ್ಥೆಯ ವತಿಯಿಂದ ಕರಡಿಗೋಡು ಗ್ರಾಮದ ನಿವಾಸಿಗಳ ಮಕ್ಕಳಿಗೆ ಪ್ರಾಥಮಿಕ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಯನ್ನು ಪ್ರಾರಂಭಿಸಲಾಗಿದೆ ಎಂದರು. ರೂ 1.25 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುವದು ಎಂದರು. ಈಗಾಗಲೇ 40 ಮಕ್ಕಳು ಸೇರ್ಪಡೆಯಾಗಿದ್ದಾರೆ. ಪೊಷಕರು ತಮ್ಮ ಮಕ್ಕಳನ್ನು ದಿನನಿತ್ಯ ಶಾಲೆಗೆ ಕಳುಹಿಸಬೇಕೆಂದು ಮನವಿ ಮಾಡಿದರು. ಇಲ್ಲಿ ಕಲಿತ ಮಕ್ಕಳು ಉನ್ನತ ಹುದ್ದೆಯನ್ನು ಅಲಂಕರಿಸ ಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ವಿ.ಕೆ ಲೋಕೇಶ್ ಮಾತನಾಡಿ, ಇವಾಲ್ವ್ ಬ್ಯಾಕ್ ಸಂಸ್ಥೆ ಹಲವಾರು ವರ್ಷಗಳಿಂದ ಕರಡಿಗೋಡು ಪ್ರಾಥಮಿಕ ಶಾಲೆ ಯನ್ನು ದತ್ತು ಪಡೆದುಕೊಂಡಿದ್ದು, ಉತ್ತಮ ರೀತಿಯಲ್ಲಿ ನಡೆಸುತ್ತಿದೆ. ಕಳೆದ ವರ್ಷ ಜಲಪ್ರಳಯವಾದ ಸಂದರ್ಭ ಗ್ರಾಮದ ನಿವಾಸಿಗಳ ಮನೆಗಳು ಜಲಾವೃತಗೊಂಡ ನೂರಾರು ಸಂತ್ರಸ್ತ ಕುಟುಂಬಕ್ಕೆ ಧನಸಹಾಯ ನೀಡಿ ಸ್ಪಂದಿಸಿದ್ದಾರೆ. ಇದೀಗ ಗ್ರಾಮದ ಬಡ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಮುಂದಾಗಿರು ವದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಫಾದರ್ ಪಿ ಜನಾಸ್ ಪ್ರಾರ್ಥನೆ ನೆರವೇರಿಸಿದರು. ಇವಾಲ್ವ್ ಬ್ಯಾಕ್ ನ ಪ್ರಧಾನ ವ್ಯವಸ್ಥಾಪಕಿ ಕಾಂತಿ ಅನೀಶ್, ಜೇಮ್ಸ್ ರಾಮಪುರಂ, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಇದ್ದರು.