ಮಡಿಕೇರಿ, ಮೇ 31: ಕೊಡಗು ಜಿಲ್ಲೆ ಕಳೆದ ವರ್ಷದ ಮಳೆ ಹಾನಿಯಿಂದಾಗಿ ಭಾರೀ ದುರಂತವನ್ನು ಎದುರಿಸಿದೆ. ಈ ಜಿಲ್ಲೆಯ ಗತವೈಭವವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮೂಲಕ ಎಲ್ಲಾ ಅಗತ್ಯ ಕೆಲಸ ಕಾರ್ಯಗಳು- ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ನೂತನ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಡಿ.ವಿ. ಸದಾನಂದ ಗೌಡ ಅವರು ಭರವಸೆಯ ಮಾತನ್ನಾಡಿದ್ದಾರೆ.‘ಶಕ್ತಿ’ಯೊಂದಿಗೆ ದೂರವಾಣಿ ಮೂಲಕ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಚಿವರು ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚು ಅನುದಾನಗಳನ್ನು ಒದಗಿಸುವದು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲು (ಮೊದಲ ಪುಟದಿಂದ) ಪ್ರಯತ್ನಿಸಲಾಗುವದು, ಕುಸಿದಿರುವ ಪ್ರವಾಸೋದ್ಯಮದ ಬೆಳವಣಿಗೆಗೂ ವಿಶೇಷ ಪ್ರಯತ್ನ ಮಾಡುವದಾಗಿ ಹೇಳಿದರು.

ಈ ಹಿಂದೆ ತಾವು ಕೊಡಗಿನ ಸಂಸದರಾಗಿದ್ದ ಸಂದರ್ಭದಲ್ಲಿ ಹಲವಾರು ಕಾರ್ಯಯೋಜನೆಗಳ ಅನುಷ್ಠಾನ - ಈಡೇರಿಕೆಗೆ ಪ್ರಯತ್ನ ನಡೆಸಿದ್ದಾಗಿ ಸ್ಮರಿಸಿದ ಅವರು ವಿಶೇಷವಾಗಿ ಕಾಫಿ ಬೆಳೆಗಾರರ ಸಮಸ್ಯೆ ಕುರಿತಾಗಿ ಕೇಂದ್ರದ ವಾಣಿಜ್ಯ ಸಚಿವರನ್ನು ಜಿಲ್ಲೆಗೆ ಕರೆತರಲಾಗಿತ್ತು. ಕುಶಾಲನಗರದ ತನಕ ರೈಲು ಮಾರ್ಗ ತರಲು ಯತ್ನಿಸಲಾಗಿತ್ತು. ಇವೆಲ್ಲವನ್ನೂ ಮತ್ತೆ ಈಡೇರಿಸಲು ಗಮನ ಹರಿಸಲಾಗುವದು ಎಂದರು.ಕುಶಾಲನಗರದ ತನಕದ ರೈಲು ಮಾರ್ಗ ಯೋಜನೆಗೆ ಈಗಾಗಲೇ ಸರ್ವೆ ಕಾರ್ಯ ಮುಗಿಸಿ ಇದನ್ನು ಒಂದು ಹಂತಕ್ಕೆ ತರಲಾಗಿದೆ. ಇದನ್ನು ಅಂತಿಮಗೊಳಿಸುವಲ್ಲಿ ಕ್ರಮ ವಹಿಸುವದಾಗಿ ಡಿ.ವಿ.ಎಸ್. ತಿಳಿಸಿದರು.

ಮಂಗಳೂರು ತನಕದ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ಯೋಜನೆ ಈಗಾಗಲೇ ಚಾಲ್ತಿಯಲ್ಲಿದ್ದು, ಇದನ್ನು ಖಂಡಿತವಾಗಿಯೂ ಕೇಂದ್ರ ಸರಕಾರ ಪೂರ್ಣಗೊಳಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನೂತನ ಖಾತೆಯ ಕುರಿತು...

ಡಿ.ವಿ.ಎಸ್. ಅವರು ಮೋದಿ ಸಂಪುಟದಲ್ಲಿ ಈ ಬಾರಿ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯನ್ನು ಪಡೆದಿದ್ದಾರೆ. ಈ ಬಗ್ಗೆ ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸಿದ ಅವರು ವಿಶೇಷವಾಗಿ ಬಡಜನರಿಗೆ ಕಡಿಮೆ ವೆಚ್ಚದಲ್ಲಿ ಔಷಧ ಒದಗಿಸುವ ಅಭಿಲಾಷೆ ತಮ್ಮದಾಗಿದೆ. ಈ ಹಿಂದೆ ರಾಜ್ಯದಲ್ಲಿ ಕೇಂದ್ರದ ಯೋಜನೆಯಂತೆ ತಾವು ಆಸಕ್ತಿ ತೋರಿದ್ದು, 5 ಸಾವಿರ ಮಳಿಗೆಗಳನ್ನು ಪ್ರಾರಂಭಿಸಲಾಗಿದೆ. ಮಾತ್ರವಲ್ಲದೆ ಬೆಂಗಳೂರಿನಲ್ಲಿ ದೊಡ್ಡ ಗೋದಾಮೊಂದನ್ನು ತೆರೆಯಲಾಗಿದೆ. ಇದನ್ನು ಈ ಬಾರಿ ಇನ್ನಷ್ಟು ವಿಸ್ತರಿಸಿ ಜನತೆಗೆ ಅನುಕೂಲ ಕಲ್ಪಿಸಲು ಯತ್ನಿಸುವದಾಗಿ ಹೇಳಿದರು. ಅಗತ್ಯವಿರುವವರಿಗೆ ಸ್ಟಂಟ್, ನೀಕ್ಸಾಪ್ ಇತ್ಯಾದಿಗಳನ್ನು ಕಡಿಮೆ ವೆಚ್ಚದಲ್ಲಿ ಒದಗಿಸುವ ಚಿಂತನೆ ಇರುವದಾಗಿ ನುಡಿದರು.