ಮಡಿಕೇರಿ, ಜೂ. 1 : ತಾ. 11 ರಂದು ವಿಶ್ವ ಪರಿಸರ ದಿನಾಚರಣೆಯನ್ನು ನಗರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಪ್ರಯುಕ್ತ ಜಿಲ್ಲೆಯಲ್ಲಿ 1 ಲಕ್ಷ ಗಿಡ ನೆಡಲು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯ ವೀಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪರಿಸರದ ಮಹತ್ವ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ವಿವಿಧ ಇಲಾಖೆಗಳ ಸಹಕಾರ ಪಡೆಯುವದರ ಜೊತೆಗೆ ಸರ್ಕಾರೇತರ ಸಂಸ್ಥೆಗಳ ಸಹಕಾರ ಪಡೆಯುವಂತೆ ಅವರು ಸಲಹೆ ಮಾಡಿದರು.

ಪರಿಸರ ದಿನಾಚರಣೆಯಂದು ನಗರಸಭೆ ವತಿಯಿಂದ ಸ್ತಬ್ಧಚಿತ್ರ ಏರ್ಪಡಿಸುವದು, ಸಾರ್ವಜನಿಕ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಏರ್ಪಡಿಸುವದು ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಶಿವರಾಜು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಮಾತನಾಡಿ ಕಳೆದ ಬಾರಿಯಂತೆ ಪರಿಸರ ದಿನಾಚರಣೆಯನ್ನು ವ್ಯವಸ್ಥಿತವಾಗಿ ಆಯೋಜಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಜಿಲ್ಲೆಯಲ್ಲಿನ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಜಿಲ್ಲೆಯಲ್ಲಿ ಎಷ್ಟು ಕೆರೆಗಳಿವೆ. ಅವುಗಳ ಸಂರಕ್ಷಣೆ ಬಗ್ಗೆ ಸಮಿತಿ ರಚನೆ ಅಗತ್ಯ ಎಂದು ನೂರುನ್ನಿಸ ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜು ಮಾತನಾಡಿ ಅರಣ್ಯ ಇಲಾಖೆಯಿಂದ 1 ಲಕ್ಷ ಗಿಡ ನೀಡಲಾಗುವದು. ಗಿಡಗಳನ್ನು ಸಂರಕ್ಷಣೆ ಮಾಡುವತ್ತ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.

ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ ಸರ್ಕಾರ ಈ ಬಾರಿ ‘ಜಲವರ್ಷ’ವೆಂದು ವಿಶೇಷ ಕಾರ್ಯಕ್ರಮವಾಗಿ ಹಮ್ಮಿಕೊಂಡಿದ್ದು, ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆ ವತಿಯಿಂದ ವಿಶೇಷ ಅಭಿಯಾನ ಆಯೋಜಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಚಂದ್ರಮೋಹನ್ ಮಾತನಾಡಿ ನದಿ ಪಾತ್ರದಲ್ಲಿ ಹೆಚ್ಚಿನ ಗಿಡ ಬೆಳೆಸಬೇಕು. ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್. ಗಣೇಶ್ ಪರಿಸರ ದಿನಾಚರಣೆ ಪ್ರಯುಕ್ತ ಜಿಲ್ಲೆಯಲ್ಲಿ ಉತ್ತಮ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿರುವ 3 ಗ್ರಾ.ಪಂ.ಗಳಿಗೆ ಬಹುಮಾನ ನೀಡಲಾಗುವದು. ಆ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಪಟ್ಟಿ ನೀಡುವಂತಾಗಬೇಕು ಎಂದರು.

ತಾ. 11 ರಂದು ಪರಿಸರ ದಿನಾಚರಣೆಯ ಸಭಾ ಕಾರ್ಯಕ್ರಮವನ್ನು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಹಾಗೂ ಜಾಥಾವನ್ನು ಜೂನಿಯರ್ ಕಾಲೇಜಿನಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲು ನಿರ್ಧರಿಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.