ಮಡಿಕೇರಿ, ಜೂ. 1: ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ವತಿಯಿಂದ ಜನರಲ್ ತಿಮ್ಮಯ್ಯ ಮೈದಾನದಲ್ಲಿ 8ನೇ ವರ್ಷದ ಜಿಲ್ಲಾ ಮಟ್ಟದ ‘ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಕಪ್’ ನಡೆಯುತ್ತಿದೆ.
ಶನಿವಾರದಂದು ಕ್ರೀಡಾಕೂಟವನ್ನು ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಎಲ್ಲಾ ಸಮಾಜವನ್ನು ಒಂದುಗೂಡಿಸಿ ದೇಶದಲ್ಲಿ ಐಕ್ಯತೆಯನ್ನು ಮೂಡಿಸುವ ಕೆಲಸವಾಗಬೇಕು ಎಂದರು.
ಧ್ವಜಾರೋಹಣವನ್ನು ಸಂತ ಮೈಕಲರ ಚರ್ಚ್‍ನ ಗುರು ಫಾ.ಅಲ್ಫ್ರೆಡ್‍ಜಾನ್ ಮೆಂಡೋನ್ಸ್ ನೆರವೇರಿಸಿದರು.
ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ಲಾರೆನ್ಸ್ ವಿ.ಎ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತ ಮೈಕಲ್ ವಿದ್ಯಾಸಂಸ್ಥೆಯ ಧರ್ಮಗುರು ಫಾ.ನವೀನ್, ಮೈಸೂರಿನ ಉದ್ಯಮಿ ಗ್ರೇಷಿಯಸ್ ರೋಡ್ರಿಗಸ್ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಸಮಾಜ ಸೇವಾ ಕ್ಷೇತ್ರದಲ್ಲಿ ಮಡಿಕೇರಿ ನಗರಸಭೆಯ ಮಾಜಿ ಸದಸ್ಯ ಕೆ.ಜಿ.ಪೀಟರ್, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ, ವೀರಾಜಪೇಟೆ ಪ.ಪಂ ಸದಸ್ಯ ಆಗಸ್ಟಿನ್ ಹಾಗೂ ಕ್ರೀಡಾ ಕ್ಷೇತ್ರದಿಂದ ಅಂಥೋಣಿ ಡಿಸೋಜ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಅಸೋಸಿಯೇಷನ್ ನ ಅಧ್ಯಕ್ಷ ಜೋಸೆಫ್ ಶ್ಯಾಂ ಅಧ್ಯಕ್ಷತೆ ವಹಿಸಿದ್ದರು.
ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಾನ್ಸನ್ ಪಿಂಟೊ, ಖಜಾಂಜಿ ರಾಯ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.