ಸೋಮವಾರಪೇಟೆ, ಜೂ. 1: ಕರ್ನಾಟಕ ಕಾವಲುಪಡೆಯ ತಾಲೂಕು ಅಧ್ಯಕ್ಷ ಮಂಜುನಾಥ್ ಅವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಗೋಣಿಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿದರು.
ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 50 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಸರ್ಕಾರಿ ಶಾಲೆಯ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಕರ್ನಾಟಕ ಕಾವಲುಪಡೆಯ ವತಿಯಿಂದ ವಾರ್ಷಿಕ 15 ಶಾಲೆಗಳಿಗೆ ಉಚಿತವಾಗಿ ನೋಟ್ಪುಸ್ತಕ ವಿತರಿಸಲಾಗುತ್ತಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣ ಹಾಗೂ ತಾಲೂಕು ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಈ ಸಂದರ್ಭ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಹೆಚ್.ಹೆಚ್. ಕುಮಾರ್, ಸದಸ್ಯ ಹರೀಶ್, ನಗರ ಉಪಾಧ್ಯಕ್ಷೆ ಮಂಜುಳಾ, ಶಾಲಾ ಮುಖ್ಯ ಶಿಕ್ಷಕಿ ಸುನಿತಾ, ಶಿಕ್ಷಕರಾದ ನಾಗವೇಣಿ, ರಾಜಪ್ಪ, ಸುಜಾತ ಸೇರಿದಂತೆ ಇತರರು ಉಪಸ್ಥಿತರಿದ್ದರು.