ಸುಂಟಿಕೊಪ್ಪ, ಜೂ. 1: ದೇಶ ಉಳಿಯಬೇಕಾದರೆ ಸೈನಿಕರೂ ಎಷ್ಟು ಮುಖ್ಯವೋ ಅಷ್ಟೇ ರೈತರು ಮುಖ್ಯವಾಗಿದ್ದಾರೆ. ಕೃಷಿಯ ಬಗೆಗಿನ ಸವಲತ್ತು, ಸೌಲಭ್ಯ ಹಾಗೂ ಮಾಹಿತಿಗಳು ಬೇಕಾದರೆ ಕೃಷಿ ಕೇಂದ್ರಗಳಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ತಾಲೂಕು, ಸುಂಟಿಕೊಪ್ಪ ಹೋಬಳಿ ಕೃಷಿ ಇಲಾಖೆ ವತಿಯಿಂದ 7ನೇ ಹೊಸಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಸ್ತು ಪ್ರದರ್ಶನದ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಇತ್ತೀಚಿನ ದಿನಗಳಲ್ಲಿ ಕೃಷಿ ಬಗ್ಗೆ ರೈತರಿಗೆ ಆಸಕ್ತಿ ಕಡಿಮೆಯಾಗಿದೆ. ನಿರ್ಲಕ್ಷ್ಯ ಮಾಡದೇ ಕೃಷಿ ಇಲಾಖೆಗಳಿಗೆ ತೆರಳಿ ಸೂಕ್ತ ಸಲಹೆ ಕಂಡುಕೊಂಡು ದೇಶದ ಏಳಿಗೆಯಲ್ಲಿ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಚೆಟ್ಟಳ್ಳಿ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತÀನಾಡಿ, ರೈತರ ಪರವಾಗಿ ಕೇಂದ್ರ ಸರ್ಕಾರ ನಿಂತಿದೆ. ಯಾರೂ ದೃತಿಗೆಡುವ ಪ್ರಮೇಯವೇ ಇಲ್ಲ. ನೀರಿನ ಬರ ಬಂದೆರಗಿದೆ. ನೀರಿನ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು. ಸೋಮವಾರಪೇಟೆ ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಎಂ. ಸುಮಲತ ವಹಿಸಿದ್ದರು. ವೇದಿಕೆಯಲ್ಲಿ ಸೋಮವಾರಪೇಟೆ ಪುಷ್ಪಗಿರಿ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಎಂ.ಎಸ್. ದೇವಯ್ಯ, ವಿಜ್ಞಾನಿಗಳಾದ ಬಸವಲಿಂಗಯ್ಯ, ಡಾ. ವೇಣುಗೋಪಾಲ್ ರೆಡ್ಡಿ, ಡಾ. ವೆಂಕಟರಮಣಪ್ಪ, ಎಂ.ಸಿ. ನಾಣಯ್ಯ, ಕುಶಾಲನಗರ ಕೃಷಿ ಅಧಿಕಾರಿ ಪಿ.ಸಿ. ಪೂಣಚ್ಚ, ಸುಂಟಿಕೊಪ್ಪ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಪಿ.ಎಸ್. ದೇವಯ್ಯ ಇತರರು ಇದ್ದರು. ಅನಿಲ ಡಿಸೋಜಾ ಸ್ವಾಗತಿಸಿದರೆ, ಶಿವನಿ ತಂಡ ರೈತ ಗೀತೆ ಹಾಡಿದರು.