ಮಡಿಕೇರಿ, ಮೇ 30: ಈ ಹಿಂದೆ ಕೊಡಗು - ಮಂಗಳೂರು ಲೋಕಸಭಾ ಕ್ಷೇತ್ರವಿದ್ದ ಸಂದರ್ಭ ಸಂಸತ್ ಸದಸ್ಯರಾಗಿ, ಬಳಿಕ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಕಳೆದ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಕೊಡಗಿನ ಅಳಿಯ ಡಿ.ವಿ. ಸದಾನಂದ ಗೌಡ ಅವರು ಇದೀಗ ಎರಡನೆಯ ಬಾರಿಗೆ ಮತ್ತೊಮ್ಮೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಆರಂಭದಲ್ಲಿ ರೈಲ್ವೆ ಖಾತೆ, ಬಳಿಕ ಕಾನೂನು ಸಚಿವ ಹಾಗೂ ಸಾಂಖ್ಯಿಕ ಖಾತೆಯನ್ನು ಕಳೆದ ಬಾರಿ ನಿಭಾಯಿಸಿದ್ದ ದೇವರಗುಂಡ ವಿ. ಸದಾನಂದಗೌಡ ಅವರು ಈ ಬಾರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಸಚಿವರಾಗುವ ಅವಕಾಶ ಪಡೆದಿದ್ದಾರೆ. ಡಿ.ವಿ.ಎಸ್. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂದರ್ಭ ರಾಜಧಾನಿ ನವದೆಹಲಿಯಲ್ಲಿ ಡಿ.ವಿ.ಎಸ್. ಪತ್ನಿ ಕೊಡಗಿನ ಗುಡ್ಡೆ ಹೊಸೂರುವಿನ ಗುಡ್ಡೆಮನೆ ಕುಟುಂಬಕ್ಕೆ ಸೇರಿದವರಾದ ಡಾಟಿ ಸದಾನಂದ ಗೌಡ, ಪುತ್ರ ಕಾರ್ತಿಕ್ ಗೌಡ ಸೇರಿದಂತೆ ಕಾರ್ತಿಕ್ ಗೌಡ ಅವರ ಅತ್ತೆ- ಮಾವರಾದ ಕೊಡಗಿನ (ಮೊದಲ ಪುಟದಿಂದ) ಕುಶಾಲನಗರದ ಉದ್ಯಮಿ ಕೂಡಕಂಡಿ ನಾಣಯ್ಯ ಹಾಗೂ ಸುಧಾ, ಸೊಸೆ ಸ್ವಾತಿ (ರಾಜಶ್ರೀ) ಶ್ರೇಯಾ (ಜಯಶ್ರೀ) ಮೊಮ್ಮಗು ಹಿಂತಾಂಶ ರೊಂದಿಗೆ ಪಾಲ್ಗೊಂಡು ಸಂತಸ ಹಂಚಿಕೊಂಡರು.
ಗುಡ್ಡೆಹೊಸೂರಿನಲ್ಲಿ...
ಡಿ.ವಿ.ಎಸ್. ಕೇಂದ್ರ ಸಚಿವರಾದ ಹಿನ್ನೆಲೆಯಲ್ಲಿ ಅವರ ಮಾವನ ಮನೆಯಾದ ಗುಡ್ಡೆಹೊಸೂರುವಿನ ದಿ. ಗುಡ್ಡೆಮನೆ ಮಂದಣ್ಣ ಅವರ ನಿವಾಸದಲ್ಲಿ ಕುಟುಂಬ ಸದಸ್ಯರು ಸಂಭ್ರಮಾಚರಿಸಿದರು. ಕುಟುಂಬ ಸದಸ್ಯರಾದ ಜಿ.ಎಂ. ಮಣಿಕುಮಾರ್, ಜಿ.ಎಂ. ವಿಶು, ಪವಿತ್ರ, ಪಾಲು, ಮತ್ತಿತರರು ಪರಸ್ಪರ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.