ಮಡಿಕೇರಿ, ಮೇ 30: ಮಡಿಕೇರಿ ನಗರದ ಬಹುತೇಕ ಜನತೆಗೆ ಚಿರಪರಿಚಿತರಾಗಿದ್ದ 80 ವರ್ಷ ಪ್ರಾಯದ ನಿವೃತ್ತ ಪೊಲೀಸ್ ಹೆಡ್ ಕಾನ್ಸ್‍ಟೇಬಲ್ ಕೀಪಾಡಂಡ ನಂಜುಂಡ ಅವರು ನಾಪತ್ತೆಯಾಗಿ ಇದೀಗ ಐದೂವರೆ ತಿಂಗಳಾದರೂ ಅವರ ಕುರಿತಾದ ಯಾವದೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಮಡಿಕೇರಿ ಪತ್ರಿಕಾಭವನದ ಎದುರು ಮನೆಯ ನಿವಾಸಿಯಾಗಿದ್ದ ನಂಜುಂಡ ಅವರು ನಗರದ ದೇಗುಲಗಳಿಗೆ ತೆರಳುವದರೊಂದಿಗೆ ಬೆಳಿಗ್ಗೆ ಸಂಜೆ ವಾಕಿಂಗ್ ಮೂಲಕ ಬಹುತೇಕರಿಗೆ ಪರಿಚಯದ ವ್ಯಕ್ತಿಯಾಗಿದ್ದರು. 2018ರ ಡಿಸೆಂಬರ್ 16ರಂದು ತಮ್ಮ ಸ್ವಗ್ರಾಮವಾದ ಚೇರಂಬಾಣೆಯ ಪಾಕ ದೇವಸ್ಥಾನಕ್ಕೆಂದು ತೆರಳಿದ್ದ ಅವರು ಆ ದಿನದಿಂದಲೇ ಕಣ್ಮರೆಯಾಗಿದ್ದರು.ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಇದೀಗ ಸುಮಾರು ಐದೂವರೆ ತಿಂಗಳು ಪೂರ್ಣಗೊಂಡರೂ ನಂಜುಂಡ ಅವರ ಕುರಿತು ಯಾವದೇ ಮಾಹಿತಿಯೂ ಲಭ್ಯವಾಗಿಲ್ಲ. ಪೊಲೀಸ್ ಇಲಾಖೆಯ ಪ್ರಯತ್ನ ಒಂದೆಡೆಯಾದರೆ ಸಂಬಂಧಿಕರು ದೇವರ ಮೊರೆ ಹೋಗುತ್ತಿದ್ದಾರೆ. ಮಕ್ಕಳು ಇಲ್ಲದೆ ಪತ್ನಿಯೊಂದಿಗೆ ಇವರು ನಗರದಲ್ಲಿ ನೆಲೆಸಿದ್ದರು. ಪತಿಯ ಆಗಮನದ ದಾರಿ ಕಾಯುತ್ತಿರುವ ಪತ್ನಿ ಕಿಟ್ಟಿ (ಜಾನಕಿ) ಅವರು ಮನೆಯ ಗೇಟ್‍ನ ಬಳಿ ನಿಂತು ಪ್ರತಿನಿತ್ಯ ರಸ್ತೆಯತ್ತ ನೋಟ ನೆಟ್ಟಿರುವ ದೃಶ್ಯ ಸಾಮಾನ್ಯವಾಗಿದೆ.