ಸುಂಟಿಕೊಪ್ಪ,ಮೇ 30 : ಬ್ಲೂ ಬಾಯ್ಸ್ ಯೂತ್ ಕ್ಲಬ್‍ನ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವದ ಮತ್ತು ದಿ.ಡಿ.ಶಿವಪ್ಪ ಅವರ ಜ್ಞಾಪಕಾರ್ಥದ 24 ನೇ ವರ್ಷದ ರಾಜ್ಯ ಮಟ್ಟದ 'ಗೋಲ್ಡ್ ಕಪ್' ಫುಟ್‍ಬಾಲ್ ಟೂರ್ನಿಯ 7 ನೇ ದಿನದ ಪಂದ್ಯಾವಳಿ ಯಲ್ಲಿ ಕ್ಯಾಲಿಕಟ್ ಎಫ್.ಸಿ. ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿತಗೊಂಡಿರುವ ಗುರುವಾರದ ಮೊದಲ ಪಂದ್ಯಾವಳಿಯನ್ನು ಸುಂಟಿಕೊಪ್ಪ ಕನ್ನಡ ಕ್ರಿಯಾಸಮಿತಿ ಅಧ್ಯಕ್ಷರು ಹಾಗೂ ವೈದ್ಯರಾದ ಡಾ.ಯಶೋಧರ ಪೂಜಾರಿ ಚೆಂಡು ಒದೆಯುವ ಮೂಲಕ ಚಾಲನೆ ನೀಡಿದರು. ಕ್ಯಾಲಿಕಟ್ ಎಫ್.ಸಿ. ಮತ್ತು ಬೆನಕ ಎಫ್.ಸಿ. ಮಂಡ್ಯ ತಂಡಗಳ ನಡುವೆ ನಡೆದು ಪಂದ್ಯಾಟದ ಆರಂಭದಲ್ಲಿಯೇ ಹೊಂದಾಣಿಕೆ ಮಿಂಚಿನ ಆಟಕ್ಕೆ ಇಳಿದ ಕ್ಯಾಲಿಕಟ್ ತಂಡದ ಮುನ್ನಡೆ ಆಟಗಾರ ಅನುರಾಗ್ ಆರಂಭದ 6ನೇ ನಿಮಿಷದಲ್ಲಿ 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು. ಪಂದ್ಯಾವಳಿ ಮುಂದುವರೆಯುತ್ತಿದ್ದಂತೆ ಮಂಡ್ಯ ತಂಡಕ್ಕೆ 2 ಉತ್ತಮ ಅವಕಾಶಗಳು ದೊರೆತ್ತಿದ್ದರೂ ಆಟಗಾರರು ಗೋಲುಗಳಿಸುವಲ್ಲಿ ವಿಫಲರಾದರು.
ಕ್ಯಾಲಿಕಟ್ ತಂಡದ ಆಟಗಾರರು ಎದುರಾಳಿ ತಂಡದ ವಿರುದ್ಧ ಬಿರುಸಿನ ಆಟಕ್ಕೆ ಇಳಿದು 16 ನೇ ನಿಮೀಷದಲ್ಲಿ ಅನುರಾಗ್ ನೀಡಿದ ಉತ್ತಮ ಪಾಸ್ ಅನ್ನು ಸದುಪಯೋಗಪಡಿಸಿಕೊಂಡ ಹಸನ್ ಗೋಲು ಬಾರಿಸುವ ಮೂಲಕ 2-0 ಗೋಲುಗಳ ಮುನ್ನಡೆ ತಂದು ಎದುರಾಳಿ ತಂಡಕ್ಕೆ ಒತ್ತಡವನ್ನು ಹೇರಿದರು. ಪಂದ್ಯಾವಳಿ ಮುಂದುವರಿಯುತ್ತಿದ್ದಂತೆ 18ನೇ ನಿಮಿಷದಲ್ಲಿ ಕ್ಯಾಲಿಕಟ್ ತಂಡದ ಮುನ್ನಡೆ ಆಟಗಾರ ಶಹದ್ ತನ್ನಗೆ ದೊರೆತ ಉತ್ತಮ ಪಾಸ್‍ನ್ನು ಸದುಪಯೋಗ ಪಡಿಸಿಕೊಂಡು ಮತ್ತೊಂದು ಗೋಲುಗಳಿಸುವ ಮೂಲಕ 3-0 ಗೋಲು ಕ್ಯಾಲಿಕಟ್ ಮುನ್ನಡೆ ಕಾಯ್ದುಕೊಂಡಿತು.
ದ್ವಿತೀಯಾರ್ಧದಲ್ಲಿ ಮಂಡ್ಯ ತಂಡವು ವೇಗದ ಆಟದತ್ತ ಸಾಗುವ ತಮ್ಮ ತಂಡದ ಒತ್ತಡವನ್ನು ಕಡಿತಗೊಳಿಸುವ ದಿಸೆಯಲ್ಲಿ ಪ್ರಯತ್ನಪಟ್ಟರೂ ಕ್ಯಾಲಿಕಟ್ ತಂಡದ ಕ್ಷೇತ್ರ ರಕ್ಷಕ ಆಟಗಾರರು ಎಲ್ಲವನ್ನು ವಿಫಲಗೊಳಿಸಿದರು. ಕ್ಯಾಲಿಕಟ್‍ಗೆ ಹಲವು ಅವಕಾಶಗಳು ಇದ್ದರೂ ತಂಡದ ಅಂಕವನ್ನು ಹೆಚ್ಚಿಸಿಕೊಳ್ಳಲು ಮಂಡ್ಯ ತಂಡದ ಕ್ಷೇತ್ರ ರಕ್ಷಕ ಆಟಗಾರರು ವಿಫಲಗೊಳಿಸಿದರು. ಕೊನೆಯಲ್ಲಿ 3-0 ಗೋಲುಗಳಿಂದ ಕ್ಯಾಲಿಕೆಟ್ ತಂಡವು ಜಯಗಳಿಸಿ ಮುಂದಿನ ಸುತ್ತಿಗೆ ಆರ್ಹತೆ ಪಡೆಯಿತು. ಎರಡನೇ ಪಂದ್ಯವು ಯಂಗ್ ವಾರಿಯರ್ಸ್ ಎಫ್.ಸಿ ಕೆ.ಜಿ.ಎಫ್ ಮತ್ತು ಈಗಲ್ ಎಫ್.ಸಿ ಬೆಂಗಳೂರು ತಂಡಗಳ ನಡುವೆ ನಡೆಯಿತು. ಈ ಪಂದ್ಯದ ಉದ್ಘಾಟನೆಯನ್ನು ಸ್ಳೀಯ ಉದ್ಯಮಿ ರಾಮಣ್ಣ ನೆರವೇರಿಸಿದರು.
ಪಂದ್ಯದ ಆರಂಭದಿಂದಲೂ 2 ತಂಡಗಳು ಚೆಂಡಿನ ಮೇಲೆ ಹಿಡಿತವನ್ನು ಸಾಧಿಸಿದ್ದವು. ಉತ್ತಮ ಪಾಸುಗಳಿಂದ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. 2 ತಂಡದ ಆಟಗಾರರು ಗೋಲುಪಟ್ಟಿಯತ್ತ ಚೆಂಡನ್ನು ತರುತ್ತಿರುವಂತೆ ಕ್ರೀಡಾಭಿಮಾನಿಗಳು ಬೊಬ್ಬೆ ಕೇಕೇ ಹಾಕುತ್ತಾ ಗೋಲು ಹೊಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಂತೆ ನಿರಾಸೆಗೊಳ್ಳುತ್ತಿದ್ದರು. ಸಮಬಲದ ಹೋರಾಟದಿಂದ ಯಾವದೇ ಗೋಲು ದಾಖಲಾಗಲಿಲ್ಲ.
ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿದ ಕೆ.ಜಿ.ಎಫ್ ತಂಡ ಆಗಾಗ್ಗೆ ಬೆಂಗಳೂರು ತಂಡದ ಗೋಲು ಪಟ್ಟಿಯೊಳಗೆ ಧಾಳಿ ನಡೆಸಿದರೂ ಗೋಲು ಕೀಪರ್ ಅದನ್ನು ವಿಫಲಗೊಳಿಸಿದನು. ಯಾರು ಗೆಲ್ಲಬಹುದು ಎಂಬ ಕಾತರದಲ್ಲಿ ವೀಕ್ಷಿsಸುತ್ತಿದ್ದಂತೆ ಕೆ.ಜಿ.ಎಫ್,ತಂಡದ ನಾಯಕ ರಾಜನ್ 15ನೇ ನಿಮಿಷದಲ್ಲಿ ಮಿಂಚಿನ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಸಂತೋಷದಲ್ಲಿದ್ದ ಕೆ.ಜಿ.ಎಫ್ ತಂಡಕ್ಕೆ ಆಘಾತ ಒದಗಿ ಬಂದಿತು. ತಮ್ಮ ತಂಡದ ಆಟಗಾರರು ಮಾಡಿದ ತಪ್ಪಿಗಾಗಿ ಅಂಪೈರ್ ಟೈ ಬ್ರೇಕರ್ ತೀರ್ಪು ನೀಡಿದರು. ಬೆಂಗಳೂರು ತಂಡದ ಆಟಗಾರ ಸಚಿನ್ ಗೋಲು ಗಳಿಸುವಲ್ಲಿ ಸಫಲರಾದರು. ಇದರೊಂದಿಗೆ ಸಮಬಲ ಹೋರಾಟದಿಂದ ಪಂದ್ಯ ಅಂತ್ಯವಾಗಿ ಟೈ ಬ್ರೇಕರ್ ಅಳವಡಿಸಲಾಯಿತು. ಇದರಲ್ಲಿ ಬೆಂಗಳೂರು ತಂಡವು 5-4 ಗೋಲುಗಳಿಂದ ಜಯಗಳಿತು.