ರಾಹುಲ್ ಭೇಟಿಯಾದ ಸಿಎಂ ಹೆಚ್ಡಿಕೆ
ಬೆಂಗಳೂರು, ಮೇ 30: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿಯಲ್ಲಿಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಅವರು, ರಾಹುಲ್ ಗಾಂಧಿ ಅವರನ್ನು ಭೇಟಿಯಾದರು. ರಾಜ್ಯದ ಲೋಕಸಭಾ ಚುನಾವಣಾ ಫಲಿತಾಂಶ ನಂತರದ ಬೆಳವಣಿಗೆಗಳು, ಅತೃಪ್ತ ಶಾಸಕರ ನಡೆ ಹಾಗೂ ಅವರನ್ನು ಸಮಾಧಾನಪಡಿಸಲು ತೆಗೆದುಕೊಂಡಿರುವ ಕ್ರಮಗಳು, ಬಿಜೆಪಿ ಆಪರೇಷನ್ ಕಮಲದ ವಿರುದ್ಧ ಮೈತ್ರಿ ನಾಯಕರ ಕಾರ್ಯತಂತ್ರ, ಸಂಪುಟ ಪುನಾರಚನೆ, ನಿಗಮ ಮಂಡಳಿಗಳಲ್ಲಿ ಸ್ಥಾನ ಕಲ್ಪಿಸುವುದು ಸೇರಿದಂತೆ ಇನ್ನಿತರ ಮಹತ್ವದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು ಎನ್ನಲಾಗಿದೆ. ಅಲ್ಲದೇ ರಾಷ್ಟ್ರರಾಜಕಾರಣಕ್ಕೆ ರಾಹುಲ್ ಗಾಂಧಿ ನಿರ್ಣಾಯಕವಾಗಿದ್ದು, ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಕುಮಾರಸ್ವಾಮಿ ಮನವಿ ಮಾಡಿದರು ಎನ್ನಲಾಗಿದೆ. ಕುಮಾರಸ್ವಾಮಿ ರಾಹುಲ್ ಭೇಟಿ ವೇಳೆ ಸಚಿವರಾದ ಬಂಡೆಪ್ಪ ಕಾಶಂಪುರ್ ಮತ್ತು ಸಾ.ರಾ. ಮಹೇಶ್ ಜೊತೆಗಿದ್ದರು.
ನೀರಿಗಾಗಿ ರೂ. 40 ಕೋಟಿ ಬಿಡುಗಡೆ
ಬೆಂಗಳೂರು, ಮೇ 30: ರಾಜ್ಯದ ಬರಪೀಡಿತ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ರೂ. 40 ಕೋಟಿ ಅನುದಾನ ಬಿಡುಗಡೆ ಮಾಡಲು ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ನಗರ ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೆÇೀರ್ಸ್ ರಚಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅವಶ್ಯವಿರುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ತುರ್ತಾಗಿ ಅನುಷ್ಠಾನಗೊಳಿಸಬೇಕು. ಬಿಡುಗಡೆ ಮಾಡಿರುವ ಅನುದಾನದಡಿ ಕೊಳವೆ ಬಾವಿಗಳನ್ನು ಆಳಗೊಳಿಸುವ, ಸ್ವಚ್ಛಗೊಳಿಸುವದು ಹಾಗೂ ಹೈಡ್ರೋಫ್ರಾಕ್ಚರಿಂಗ್ ಕೈಗೊಳ್ಳುವದು. ನೀರು ಸರಬರಾಜು ಪೈಪುಗಳ ದುರಸ್ತಿ-ಬದಲಾವಣೆ ಕಾಮಗಾರಿಗಳು ಮತ್ತು ಅತ್ಯವಶ್ಯಕತೆಯಿದ್ದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಹಾಗೂ ಪಂಪು ಮೋಟಾರ್ ಅಳವಡಿಸುವ ಕಾಮಗಾರಿಗಳನ್ನು ಮಾತ್ರ ಈ ಅನುದಾನದಡಿ ಕೈಗೆತ್ತಿಕೊಳ್ಳಲು ಹಾಗೂ ಅನುಮೋದನೆ ನೀಡಿರುವ ಅನುದಾನವನ್ನು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶಗಳಿಗೆ ಬಳಸಬಹುದಾಗಿದೆ. ಇತರೆ ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರು ಕಾಮಗಾರಿಗಳಿಗೆ ಅವಶ್ಯಕವಿರುವ ಪಂಪು, ಮೋಟಾರ್, ಪೈಪ್ಲೈನ್ ಮತ್ತು ಇತರ ಸಲಕರಣೆಗಳ ಸಂಗ್ರಹಣೆಯನ್ನು ನಿಯಮಾನುಸಾರ ಕೆಟಿಪಿಪಿ ಕಾಯಿದೆ 1999 ಮತ್ತು ನಿಯಮಗಳು 2000 ರನ್ವಯ ಇ-ಪ್ರಕ್ಯೂರ್ ಮೆಂಟ್ ಪೆÇೀರ್ಟಲ್ ಮೂಲಕ ಕೈಗೆತ್ತಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.
ಸಂಪುಟ ಪುನರ್ ರಚನೆ ಇಲ್ಲ
ಬೆಂಗಳೂರು, ಮೇ 30: ಆಪರೇಷನ್ ಕಮಲದ ಭೀತಿಯಲ್ಲಿ ಅತೃಪ್ತ ಶಾಸಕರ ಮನವೊಲಿಸಲು ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಶಾಸಕರು, ಸಚಿವರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಿರಂತರ ಎರಡು ದಿನ ಶಾಸಕಾಂಗ ಸಭೆ, ಸಚಿವರ ಸಭೆ ಜೊತೆ ಅತೃಪ್ತರನ್ನು ಸಮಾಧಾನಪಡಿಸುವಲ್ಲಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಶಾಸಕಾಂಗ ನಾಯಕ ಸಿದ್ದರಾಮಯ್ಯ ಯಶಸ್ಸು ಕಂಡಿದ್ದಾರೆ. ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಸದಾಶಿವನಗರದ ಗೃಹ ಕಚೇರಿಯಲ್ಲಿ ನಡೆದ ಉಪಹಾರ ಕೂಟದ ಸಭೆಯಲ್ಲಿ ಸಚಿವರು ರಾಜೀನಾಮೆ ನೀಡುವದಕ್ಕೆ ವಿರೋಧ ವ್ಯಕ್ತವಾಗಿದ್ದು,ಅಂತೆಯೇ ಪಕ್ಷದ ನಾಯಕರಿಂದಲೂ ಪುನಾರಚನೆ ಬಗ್ಗೆ ಒಮ್ಮತ ಅಭಿಪ್ರಾಯ ಮೂಡದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಯಾರನ್ನು ಕೈಬಿಡದೆ, ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವದು ಬೇಡ. ತರಾತುರಿಯಲ್ಲಿ ತೆಗೆದುಕೊಳ್ಳುವ ತೀರ್ಮಾನದಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬ ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಂಡು ಮುಂದುವರೆಯುವದು ಸೂಕ್ತ. ತೀರಾ ಅಗತ್ಯ, ಅನಿವಾರ್ಯತೆ ಕಂಡು ಬಂದರೆ ಮಾತ್ರ ಸಚಿವ ಸಂಪುಟ ಪುನಾರಚನೆ ಮಾಡೋಣ ಎಂದು ಎಲ್ಲಾ ಸಚಿವರು,ಶಾಸಕಾಂಗ ನಾಯಕ, ಕೆಪಿಸಿಸಿ ಅಧ್ಯಕ್ಷರ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.
ಹಾಸನ ಜಿಲ್ಲಾಧಿಕಾರಿ ಮತ್ತೆ ವರ್ಗಾವಣೆ
ಹಾಸನ, ಮೇ 30: ಲೋಕಸಭೆ ಚುನಾವಣೆ ಮುಗಿದು ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ತೆಗೆದುಹಾಕಿದ ಕೇವಲ ಮೂರೇ ದಿನಗಳಲ್ಲಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ವರ್ಗಾವಣೆ ಮಾಡಿದೆ. ಹಾಸನ ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅಕ್ರಂ ಪಾಷಾ ಅವರನ್ನು ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಂ ಪಾಷಾ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಆಗ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಹಾನಸ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿತ್ತು. ಈ ಹಿಂದೆ ಬೆಂಗಳೂರು ಪ್ರವಾಸೋದ್ಯಮ ಇಲಾಖೆಯಲ್ಲಿ ನಿರ್ದೇಶಕರಾಗಿ ಪ್ರಿಯಾಂಕಾ ಮೇರಿ ಕಾರ್ಯನಿರ್ವಹಿಸಿದ್ದರು. ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಕಾರ್ಯನಿರ್ವಹಿಸಿ ಜನಪ್ರಿಯತೆ ಗಳಿಸಿದ್ದರು. ಆದರೆ ಚುನಾವಣಾ ಮಾರ್ಗಸೂಚಿ ಪಾಲಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿತ್ತು. ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಬಳಿಕ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯಿಂದ ತೆರವಾಗಿದ್ದ ಜಿಲ್ಲಾಧಿಕಾರಿ ಸ್ಥಾನಕ್ಕೆ ಅಕ್ರಂ ಪಾಷಾ ಅವರನ್ನು ನೇಮಿಸಲಾಗಿತ್ತು. ಅಕ್ರಂಪಾಷಾ ಅವರು ಫೆಬ್ರವರಿ 22 ರಂದು ಹಾಸನಕ್ಕೆ ವರ್ಗಗೊಂಡು ಆಗಮಿಸಿದ್ದರು. ಆದರೆ ಒಂದು ತಿಂಗಳ ಅವಧಿಯಲ್ಲೇ ಪಾಷಾರನ್ನು ಕೂಡ ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಕಳೆದ ಮಾರ್ಚ್ 30 ರಂದು ಹಾಸನ ಡಿಸಿಯಾಗಿ ಪ್ರಿಯಾಂಕಾ ಮೇರಿ ಅಧಿಕಾರ ವಹಿಸಿಕೊಂಡಿದ್ದರು.
1 ಸೆಕೆಂಡ್ ಜಾಹೀರಾತು ದರ 2 ಲಕ್ಷ
ನವದೆಹಲಿ, ಮೇ 30: ವಿಶ್ವಕಪ್ ಕ್ರಿಕೆಟ್ ಮಹಾಸಮರ ಶುರುವಾಗಿದೆ. ಅಂತೆಯೆ ಪಂದ್ಯದ ಪ್ರತಿಯೊಂದು ಸೆಕೆಂಡ್ ಸಹ ಲಕ್ಷಗಟ್ಟಲೆ ಬೆಲೆ ಬಾಳುತ್ತದೆ. ಹೌದು, 1 ಸೆಕೆಂಡ್ ಜಾಹೀರಾತು ದರ ಬರೋಬ್ಬರಿ 2 ಲಕ್ಷ ರೂಪಾಯಿ. ಸ್ಟಾರ್ ಇಂಡಿಯಾ 8 ವರ್ಷಕ್ಕೆ 12 ಸಾವಿರ ಕೋಟಿ ರೂಪಾಯಿ ನೀಡಿ ಸ್ಯಾಟ್ಲೈಟ್ ಹಕ್ಕನ್ನು ಪಡೆದಿದೆ. ಇನ್ನು ವಿಶ್ವಕಪ್ ಟೂರ್ನಿ ಮೂಲಕ ಭರ್ಜರಿ ಹಣ ಬಾಚಿಕೊಳ್ಳಲು ಪ್ರತಿ ಸೆಕೆಂಡ್ ಜಾಹೀರಾತಿಗೆ 1.7 ಲಕ್ಷದಿಂದ 2 ಲಕ್ಷ ರೂ. ದರ ನಿಗದಿಪಡಿಸಿದೆ. ಇನ್ನು ಇದು ಟೀಂ ಇಂಡಿಯಾ ಮೇಲೆ ನಡೆಯುವ ಪಂದ್ಯಗಳಿಗೆ ಮಾತ್ರ ಈ ದರ. ಓವರ್ ಮುಕ್ತಾಯದಲ್ಲಿ ಜಾಹೀರಾತು ಪ್ರಸಾರ ಮಾಡಲಾಗುತ್ತದೆ. ರನ್ ಆಫ್ ಶೆಡ್ಯೂಲ್(ಆರ್ಒಎಸ್) ವೇಳೆ 10 ಸೆಕೆಂಡ್ ಜಾಹೀರಾತಿಗೆ 17 ಲಕ್ಷದಿಂದ 20 ಲಕ್ಷದವರೆಗೂ ದರ ವಿಧಿಸಲಾಗಿದೆ. ಟೀಂ ಇಂಡಿಯಾ ಹೊರತುಪಡಿಸಿ ಇನ್ನಿತರ ಪಂದ್ಯಗಳಿಗೆ 6 ಲಕ್ಷದಿಂದ 7 ಲಕ್ಷದವರೆಗೆ ಸ್ಲಾಟ್ ದರವಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಜಗನ್ ಮೋಹನ್ ರೆಡ್ಡಿ
ವಿಜಯವಾಡ, ಮೇ 30: ಆಂಧ್ರಪ್ರದೇಶದ ವಿಭಜನೆಯ ಬಳಿಕ ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ವೈಎಸ್ಆರ್ ಕಾಂಗ್ರೆಸ್ನ ಜಗನ್ ಮೋಹನ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಜಯವಾಡದ ಐಜಿಎಂಸಿ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆದಿದ್ದು, ಸಂಪುಟ ಸಚಿವರು ಜೂ. 7 ಕ್ಕೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಪದಗ್ರಹಣ ಕಾರ್ಯಕ್ರಮದಲ್ಲಿ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಡಿಎಂಕೆ ನಾಯಕ ಎಂ.ಕೆ. ಸ್ಟ್ಯಾಲಿನ್, ಪಾಂಡಿಚರಿ ಆರೋಗ್ಯ ಸಚಿವ ಮಲ್ಲಡಿ ಕೃಷ್ಣರಾವ್ ವಿಶೇಷ ಅತಿಥಿಗಳಾಗಿ ಭಾಗಿಯಾಗಿದ್ದರು.