ವೀರಾಜಪೇಟೆ, ಮೇ 30: ಬ್ಯೆರನಾಡು ದೇವಣಗೇರಿ ಈಶ್ವರ ಭಗವತಿ ದೇವ ಉತ್ಸವವು ವಿಜೃಂಭಣೆಯಿಂದ ಜರುಗಿತು. ತಾ 27 ರಂದು ಪೂರ್ವಾಹ್ನ 8 ಗಂಟೆಗೆ ಮಹಾ ಗಣಪತಿ ಹೋಮದೊಂದಿಗೆ ಆರಂಭವಾದ ಉತ್ಸ್ಸವದಲ್ಲಿ ನಾಡಿನ ಸುಖ ಶಾಂತಿ ನೆಮ್ಮದಿ ಹಾಗೂ ಅಭ್ಯುದಯಕ್ಕಾಗಿ ಮೃತ್ಯುಂಜಯ ಹೋಮ, ಕಲಶಾಭಿಷೇಕ, ಈಶ್ವರ-ಭಗವತಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳ ಜೊತೆಗೆ ದೇವರ ಕಟ್ಟು ಹಾಕುವ ಕಾರ್ಯಕ್ರಮ ನಡೆಯಿತು.
28, 29 ರಂದು ಪೂರ್ವಹ್ನದಿಂದಲೇ ಪೂಜೆ, ಧ್ವಜಸ್ತಂಭ ದೀಪಾರಾಧನೆ, ದೇವಾಲಯದ ಸುತ್ತ ಈಶ್ವರ-ಭಗವತಿ ಉತ್ಸವ ಮೂರ್ತಿಗಳ ಪ್ರದಕ್ಷಿಣೆ ಕಾರ್ಯ ಜರುಗಿತು. 30 ರಂದು ಪೂರ್ವಾಹ್ನ 5 ಗಂಟೆಗೆ ಇರಳು ಬೆಳಕು, ಜೋಡಿ ಉತ್ಸವ ಮೂರ್ತಿಗಳ 7 ಸುತ್ತು ಪ್ರದಕ್ಷಿಣೆ, ಕಲಶಾಭಿಷೇಕ ನಡೆಯಿತು. 11 ಗಂಟೆಗೆ ದೇವತಕ್ಕರಾದ ಅಲ್ಲಪಂಡ ಕುಟುಂಬದ ಐನ್ಮನೆ ಯಿಂದ ದುಡಿಕೊಟ್ಟ್ ಪಾಟ್ ಹಾಗೂ ಕೊಂಬ್ಕೊಟ್ಟ್ ವಾಲಗದೊಂದಿಗೆ ಎತ್ತುಪೋರಾಟ ನಡೆಯಿತು. ಅಪರಾಹ್ನ ತೆಂಗಿನಕಾಯಿಗೆ ಗುಂಡು ಹೊಡೆಯುವದರ ಮೂಲಕ ಹಬ್ಬದ ಕಟ್ಟನ್ನು ಸಡಿಲಿಸಲಾಯಿತು. ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು. ಸಂಜೆ 4 ಗಂಟೆಗೆ ದೇವಾಲಯದ ಬಳಿ ಇರುವ ಬನಕ್ಕೆ ತೆರಳಿ ಅಯ್ಯಪ್ಪ ದೇವರಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಮೊಗ ಮಂಟಪಕ್ಕೆ ವಸಂತ ಪೂಜೆ ನಡೆಸಲಾಯಿತು.
ತಾ. 31 ರಂದು(ಇಂದು) ಸಂಜೆ 4.30 ಗಂಟೆಗೆ ದೇವರ ಅವಭೃತÀ ಸ್ನಾನದೊಂದಿಗೆ ಅಲಂಕಾರ ಪೂಜೆ ಹಾಗೂ ಉತ್ಸವ ಮೂರ್ತಿಗಳು ದೇವಾಲಯದ ಸುತ್ತ 11 ಸುತ್ತು ಪ್ರದಕ್ಷಿಣೆಯ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಗುವದು.