ಸೋಮವಾರಪೇಟೆ, ಮೇ. 27: ತಾಲೂಕಿನ ಹರಗ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಮೊಬೈಲ್ ನೆಟ್‍ವರ್ಕ್ ಇಲ್ಲದೇ ಇರುವದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಇಲ್ಲಿನ ಬಿಎಸ್‍ಎನ್‍ಎಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬಿಎಸ್‍ಎನ್‍ಎಲ್ ಟವರ್ ಹರಗ ಗ್ರಾಮದಲ್ಲಿದ್ದರೂ ಸಮರ್ಪಕವಾಗಿ ನೆಟ್‍ವರ್ಕ್ ಇರುವದಿಲ್ಲ. ಓಬೀರಾಯನ ಕಾಲದ ಜನರೇಟರ್ ಇದ್ದು, ಇದು ಆಗಾಗ್ಗೆ ದುರಸ್ತಿಗೀಡಾಗುತ್ತಿದೆ. ಹೊಸ ಜನರೇಟರ್ ಅಳವಡಿಸುವಂತೆ ಈ ಹಿಂದೆಯೇ ಕಚೇರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಸಮಸ್ಯೆ ಬಗೆಹರಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಸ್ಥಗಿತಗೊಳ್ಳುವ ಸಂದರ್ಭ ಟವರ್ ಸಹ ತನ್ನ ಕಾರ್ಯವನ್ನು ಸ್ಥಗಿತಗೊಳಿಸುತ್ತಿದೆ. ಕೇಂದ್ರದಲ್ಲಿರುವ ಜನರೇಟರ್‍ಗೆ ಸಮರ್ಪಕವಾಗಿ ಡೀಸೆಲ್ ಸರಬರಾಜು ಮಾಡುತ್ತಿಲ್ಲ. 3 ಜನ ವಾಚ್‍ಮೆನ್‍ಗಳಿದ್ದು, ಅವರುಗಳಿಗೂ ಕಳೆದ 4 ತಿಂಗಳಿನಿಂದ ಸಂಬಳ ನೀಡಿಲ್ಲ. ಒಟ್ಟಾರೆ ಹರಗ ಗ್ರಾಮದಲ್ಲಿರುವ ಟವರ್ ಬಗ್ಗೆ ಬಿಎಸ್‍ಎನ್‍ಎಲ್ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾ.ಪಂ. ಸದಸ್ಯ ತ್ರಿಶೂಲ್ ಆರೋಪಿಸಿದರು.
ತಕ್ಷಣ ಹೊಸ ಜನರೇಟರ್ ಅಳವಡಿಸಬೇಕು. 24 ಗಂಟೆಯೂ ನೆಟ್‍ವರ್ಕ್ ಇರಬೇಕು. ಏಜೆನ್ಸಿ ಮೂಲಕ ಕೆಲಸ ಮಾಡುತ್ತಿರುವ ನೌಕರರಿಗೆ ಸಂಬಳ ನೀಡಬೇಕು. ಮುಂದಿನ 2 ದಿನಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.
ಹರಗದಲ್ಲಿರುವ ಟವರ್ ಕೊತ್ನಳ್ಳಿ, ಕುಡಿಗಾಣ, ಹರಗ, ಬೆಟ್ಟದಕೊಪ್ಪ, ಜಕ್ಕನಳ್ಳಿ, ಕಟ್ಟೆ, ಸೂರ್ಲಬ್ಬಿ, ಗರ್ವಾಲೆ, ಹಮ್ಮಿಯಾಲ, ಚಾಮೇರಮನೆ ಪ್ರದೇಶಗಳಿಗೆ ನೆಟ್‍ವರ್ಕ್ ವಿಸ್ತರಣೆಯಾಗುತ್ತಿದ್ದು, ಅಸಮರ್ಪಕ ನಿರ್ವಹಣೆಯಿಂದ ಸಮಸ್ಯೆ ಎದುರಾಗುತ್ತಿದೆ. ನೆಟ್‍ವರ್ಕ್ ಇಲ್ಲದೇ ಯಾವದೇ ಮಾಹಿತಿಗಳು ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಸಾರ್ವಜನಿಕರು ಪರಸ್ಪರ ಸಂಪರ್ಕ ಸಾಧಿಸುವದಾದರೂ ಹೇಗೆ? ಎಂದು ತ್ರಿಶೂಲ್ ಪ್ರಶ್ನಿಸಿದರು.
ಮಳೆಗಾಲದಲ್ಲಿ ಶಾಂತಳ್ಳಿಯಿಂದ ಹರಗದವರೆಗೆ ಗ್ರಾಮಸ್ಥರೇ ಜಂಗಲ್ ಕಟ್ಟಿಂಗ್ ಮಾಡುವ ಮೂಲಕ ಇಲಾಖೆಗೆ ಸಹಕಾರ ನೀಡುತ್ತಿದ್ದಾರೆ. ಆದರೆ ಇಲಾಖೆಗಳು ಗ್ರಾಮಸ್ಥರ ಬೇಡಿಕೆಗಳ ಬಗ್ಗೆ ಸ್ಪಂದಿಸುವದಿಲ್ಲ ಎಂದು ಗರ್ವಾಲೆ ಗ್ರಾ.ಪಂ. ಸದಸ್ಯ ಚಾಮೇರ ಪಳಂಗಪ್ಪ ಆರೋಪಿಸಿದರು.
ಈ ಬಗ್ಗೆ ಮನವಿ ಸ್ವೀಕರಿಸಲು ಕಚೇರಿಯಲ್ಲಿ ಬಿಲ್ ಕಲೆಕ್ಟರ್ ಬಿಟ್ಟರೆ ಯಾರೂ ಇಲ್ಲದ ಹಿನ್ನೆಲೆ ದೂರವಾಣಿ ಮೂಲಕ ಮಡಿಕೇರಿ ಟಿಡಿಎಂ ಅವರಿಗೆ ಕರೆ ಮಾಡಿ ವಿವರಣೆ ಒದಗಿಸಲಾಯಿತು. ಗ್ರಾಮಸ್ಥರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುವ ಭರವಸೆ ದೊರೆತ ನಂತರ ಪ್ರತಿಭಟನೆಯನ್ನು ಹಿಂಪಡೆಯ ಲಾಯಿತು. ಈ ಸಂದರ್ಭ ಗ್ರಾಮಸ್ಥರಾದ ಶರಣ್, ಆದಿತ್ಯ, ನಂದೀಶ್, ಪ್ರಕಾಶ್, ನಿಶಾಂತ್, ಸಂಜಯ್, ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.