ಮೂರ್ನಾಡು, ಮೇ 27 : ಕೊಡಗು ಕೆಂಬಟ್ಟಿ ಜನಾಂಗದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯದಲ್ಲಿ ಅರಮೇರಿ ಎವೈಸಿಸಿ ತಂಡ ಕೈಕೇರಿಯ ಕೆವೈಸಿಸಿ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಮೂರ್ನಾಡು ವಿದ್ಯಾಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ 2 ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅರಮೇರಿ ಎವೈಸಿಸಿ ತಂಡವು 6 ಓವರ್‍ನಲ್ಲಿ 6 ವಿಕೆಟ್ ಕಳೆದುಕೊಂಡು 60 ರನ್‍ಗಳ ಗುರಿ ನೀಡಿತು. ನಂತರ ಬ್ಯಾಟ್ ಮಾಡಿದ ಕೆವೈಸಿಸಿ ತಂಡವು 5 ವಿಕೆಟ್ ನಷ್ಟಕ್ಕೆ 36 ರನ್‍ಗಳನಷ್ಟೆ ಗಳಿಸಲು ಶಕ್ತಗೊಂಡು ರನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಮಹಿಳೆಯ ಥ್ರೋಬಾಲ್ ಪಂದ್ಯದಲ್ಲಿ ಬಿಳುಗುಂದ ಪ್ರಥಮ ಹಾಗೂ ಜೋಡುಬೀಟಿ ತಂಡ ದ್ವಿತೀಯ ಬಹುಮಾನ ಪಡೆಯಿತು. ಪುರುಷರ ವಾಲಿಬಾಲ್ ಪಂದ್ಯದಲ್ಲಿ ಜೋಡುಬೀಟಿ ತಂಡ ಪ್ರಥಮ ಹಾಗೂ ಅರಮೇರಿ ಎವೈಸಿಸಿ ತಂಡ ದ್ವಿತೀಯ ಬಹುಮಾನ ಗೆದ್ದುಕೊಂಡಿತು.

ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ ಜನಾಂಗ ಬಾಂಧವರು ಒಂದುಗೂಡಿ ಒಗ್ಗಟ್ಟು ಮೂಡಿಸುವಲ್ಲಿ ಇಂತಹ ಕ್ರೀಡಾಕೂಟ ಸಹಕಾರಿ ಆಗಿದೆ. ಇಂತಹ ಕ್ರೀಡಾಕೂಟಕ್ಕೆ ಜನಾಂಗದ ಪ್ರತಿಯೊಬ್ಬರು ಸಹಕಾರ ನೀಡಬೇಕು. ಆಗ ಜನಾಂಗದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಕಡಂಗ ಗ್ರಾಮ ಪಂಚಾಯಿತಿ ಸದಸ್ಯ ಯು.ಎ. ಪ್ರಕಾಶ್, ದಾನಿಗಳಾದ ಅಟ್ಟು ಪೂವಯ್ಯ, ನಿವೃತ್ತ ಸೈನಿಕ ಭೀಮಣ್ಣಿ, ಚುಬ್ಬಕ್ಕಿ, ಹರೀಶ್ ಕುಟ್ಟಪ್ಪ, ಕಿಶೋರ್ ಪೂವಯ್ಯ ಇತರರು ಹಾಜರಿದ್ದರು.