ಸೋಮವಾರಪೇಟೆ, ಮೇ 28: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು ಬಾಣೆ ಗ್ರಾಮದಲ್ಲಿ ತಡೆಗೋಡೆ ಮತ್ತು ರಸ್ತೆ ಸಮಸ್ಯೆಯನ್ನು ತಿಂಗಳೊಳಗೆ ಬಗೆಹರಿಸಬೇಕೆಂದು ಗ್ರಾಮ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಪತ್ರಿಕಾಭವನದಲ್ಲಿ ಆಯೋಜಿಸ ಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಅಧ್ಯಕ್ಷ ಮಹೇಂದ್ರ, ಗ್ರಾಮದ ರಸ್ತೆ ತೀರಾ ಹಾಳಾಗಿದ್ದು, ಕಳೆದ ಹಲವು ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ. ಮನೆಯ ಸಮೀಪದ ಮಣ್ಣು ಕುಸಿಯುತ್ತಿದೆ. ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಸುಮಾರು ಹತ್ತರಿಂದ ಹನ್ನೆರಡು ಮನೆಗಳಿಗೆ ತೊಂದರೆಯಾಗಲಿದೆ. ಕೂಡಲೇ ಸಂಬಂಧಿಸಿದವರು ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.
ಗ್ರಾಮಕ್ಕೆ ಸಂಪರ್ಕಿಸುವ ಅಲೆಕಟ್ಟೆ ಬಳಿ ರಾಜ್ಯ ಹೆದ್ದಾರಿಯ ಒಂದು ಬದಿಯಲ್ಲಿ ಸುಮಾರು ರೂ. 22 ಲಕ್ಷ ವೆಚ್ಚದÀಲ್ಲಿ ನಿರ್ಮಿಸಿರುವ ತಡೆಗೋಡೆ ಕುಸಿದು ಬಿದ್ದಿರುವದರಿಂದ ರಸ್ತೆಗೆ ತೊಂದರೆ ಎದುರಾಗಿದೆ. ಇದನ್ನು ಸರಿಪಡಿಸುವಂತೆ ಮನವಿ ಮಾಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಕೂಡಲೇ ತಡೆ ಗೋಡೆ ನಿರ್ಮಿಸಿ ರಸ್ತೆಯನ್ನು ಉಳಿಸಬೇಕೆಂದು ಒತ್ತಾಯಿಸಿದರು.
ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಇಲ್ಲಿನ ಜನರೊಂದಿಗೆ ಮಾತನಾಡುವ ಜನಪ್ರತಿನಿಧಿಗಳು ಸಮಸ್ಯೆ ಪರಿಹರಿಸಲು ಮಾತ್ರ ಮುಂದಾಗುತ್ತಿಲ್ಲ. ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಕೂಲಿ ಕಾರ್ಮಿಕರು ಇರುವ ಇಲ್ಲಿನ ಸಮಸ್ಯೆ ಬಗೆಹರಿಸುತ್ತಿಲ್ಲ. ಮುಂದಿನ ಮಳೆಗಾಲದಲ್ಲಿ ಇಲ್ಲಿನ ಕಾರ್ಮಿಕರ ಬದುಕು ಬೀದಿಗೆ ಬೀಳಲಿದೆ. ಕೂಡಲೇ ಸಂಬಂಧಿಸಿದವರು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದ ಸಮುದಾಯ ದಾಖಲಾತಿ ಇಲ್ಲದ ಹಿನ್ನೆಲೆ ಅನುದಾನ ಬಳಕೆ ಮಾಡಲು ಆಗುತ್ತಿಲ್ಲ. ಹಿಂದೂ ರುದ್ರಭೂಮಿಗೆ ತೆರಳಲು ರಸ್ತೆಯಿಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಹೆಚ್.ಈ. ವೆಂಕಟೇಶ್, ಹೆಚ್.ಆರ್. ಗಗನ್, ನವೀನ್ ಮತ್ತು ಅರುಣ್ ಉಪಸ್ಥಿತರಿದ್ದರು.