ವೀರಾಜಪೇಟೆ, ಮೇ 28: ಕಟ್ಟಡ ಕಾರ್ಮಿಕರ ಸೇವಾ ಮಂಡಳಿಯಲ್ಲಿ ಸಾಕಷ್ಟು ಅನುದಾನವಿದ್ದರೂ ಅದು ಸರಿಯಾಗಿ ಕಟ್ಟಡ ಕಾರ್ಮಿಕರಿಗೆ ಬಳಕೆಯಾಗದಿರುವದರಿಂದ ಮುಂದೆ ಸಂಘಟನೆಯನ್ನು ವಿಸ್ತಾರಗೊಳಿಸಿ ಕಾರ್ಮಿಕರ ಹೋರಾಟ ಮುಂದುವರಿಯಲಿದೆ ಎಂದು ಕಟ್ಟಡ ಕಾರ್ಮಿಕ ಸಂಘಟನೆಯ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಮಹಂತೇಶ್ ಹೇಳಿದರು.
ವೀರಾಜಪೇಟೆ ಪುರಭವನದಲ್ಲಿ ಆಯೋಜಿಸಲಾಗಿದ್ದ ‘ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ವಾರ್ಷಿಕ ಮಹಾಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಂತೇಶ್ ಅವರು ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ ಕಟ್ಟಡ ಕಾರ್ಮಿಕರಿಗಾಗಿ ದೇಶದಲ್ಲಿ ಹೆಚ್ಚಿನ ಸೌಲಭ್ಯಗಳಿದ್ದರೂ ಅದು ದೊರಕುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿರುವ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಸರಕಾರದ ಮುಂದೆ ಇಡಲಾಗಿದೆ. ಈ ಹಿಂದೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶ ಹಾಗೂ ರಾಜ್ಯವ್ಯಾಪಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿತ್ತು ಆದರೂ ಕಾರ್ಮಿಕರ ಸಮಸ್ಯೆಗಳು ಬಗೆಹರಿದಿಲ್ಲ. ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸಲಾಗುವದು ಎಂದು ಹೇಳಿದರು.
ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಗೌರವ ಅಧ್ಯಕ್ಷ ಐ.ಆರ್. ಪ್ರಮೋದ್ ಪ್ರಾಸ್ತಾವಿಕವಾಗಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕಟ್ಟಡ ಕಟ್ಟಲು ಮರಳು ಸಿಗದಂತಾಗಿದೆ ಮರಳು ಇದ್ದರೂ ದುಬಾರಿ ಹಣ ನೀಡಿ ಖರೀದಿಸ ಬೇಕಾಗಿರುವದರಿಂದ ಅನೇಕ ಕೂಲಿ ಕಾರ್ಮಿಕರು ಕಟ್ಟಡದ ಕೆಲಸಗಳಿಲ್ಲದೆ ಬೀದಿಪಾಲಾಗಲಿದ್ದಾರೆ. ಇದರಿಂದ ಕಾರ್ಮಿಕರ ಕುಟುಂಬಗಳು ಜೀವನ ನಡೆಸುವದೇ ಕಷ್ಟಕರವಾಗಿದೆ. ಸರಕಾರ ಮರಳು ನೀತಿಯ ಬಗ್ಗೆ ದ್ವಂದ್ವ ನೀತಿ ಅನುಸರಿಸುತ್ತಿರುವದರಿಂದ ಜಿಲ್ಲೆಯಲ್ಲಿ ಮರಳಿನ ಅಭಾವ ಉಂಟಾಗಿ ಕಾರ್ಮಿಕರಿಗೂ ಕೆಲಸವಿಲ್ಲದಂತಾಗಿದೆ. ಜಿಲ್ಲೆಯ ಕಾರ್ಮಿಕರು ಸಂಘಟನೆ ಯನ್ನು ಬಲಪಡಿಸಿ ಹೋರಾಟದ ಮೂಲಕ ಸರಕಾರದಿಂದ ಸಿಗುವಂತ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಸಾಲಿ ಪೌಲಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಿ.ಐ.ಟಿ.ಯು.ನ ಜಿಲ್ಲಾ ಉಪಾಧ್ಯಕ್ಷ ಎನ್.ಡಿ. ಕುಟ್ಟಪ್ಪ ಮಾತನಾಡಿ, ಸಂಘಟನೆಯ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಹೇಳಿದರು, ಪ್ರಧಾನ ಕಾರ್ಯದರ್ಶಿ ಹೆಚ್.ಪಿ. ರಮೇಶ್ ಮಾತನಾಡಿ, ಸಂಘಟನೆಯನ್ನು ಬಲಪಡಿಸುವಲ್ಲಿ ಸದಸ್ಯರು ಮುಂದಾಗಬೆಕು ಎಂದರು. ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸಿ. ಸಾಬು ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು.