ಸಿದ್ದಾಪುರ, ಮೇ 27 : ನೆಲ್ಯಹುದಿಕೇರಿ ಬಾಗದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಹಿಂಡಿನ ಪೈಕಿ ಇರುವ ಪುಂಡಾನೆಯೊಂದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ.ನೆಲ್ಯಹುದಿಕೇರಿಯ ಮೇರಿ ಲ್ಯಾಂಡ್ ಎಸ್ಟೇಟ್‍ನಲ್ಲಿ ಕಾಡಾನೆ ಹಿಂಡು ಕಳೆದ ಕೆಲ ದಿನಗಳಿಂದ ಬೀಡುಬಿಟ್ಟಿದ್ದು, ಮನೆ ಹಾಗೂ ತೋಟಗಳಲ್ಲಿ ಪುಂಡಾಟಿಕೆ ಮಾಡುತ್ತಿದ್ದವು. ಮಾತ್ರವಲ್ಲದೇ ಹಿಂಡಿನಲ್ಲಿದ್ದ ಪುಂಡಾನೆಯು ಜನರ ಮೇಲೆ ದಾಳಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪುಂಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ನೆಲ್ಯಹುದಿಕೇರಿ, ನಲ್ವತ್ತೆಕ್ರೆ, ಬೆಟ್ಟದಕಾಡು ಭಾಗದಲ್ಲಿ ಕಾಡಾನೆಗಳು ಹಾಡಹಗಲೇ ರಾಜಾರೋಷವಾಗಿ ಸುತ್ತಾಡುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದರು. ಇದಲ್ಲದೇ ಕಾರ್ಮಿಕರು ಕೂಡ ತೋಟಗಳಿಗೆ ಕೆಲಸಕ್ಕೆ ತೆರಳಲು ಹಿಂಜರಿಯುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಮೇರಿ ಲ್ಯಾಂಡ್ ತೋಟದಲ್ಲಿ
(ಮೊದಲ ಪುಟದಿಂದ) ಕಾರ್ಮಿಕನೋರ್ವ ಅಂಗಡಿಗೆ ತೆರಳಿ ಸಂಜೆ ಮನೆಗೆ ಮರಳುತ್ತಿದ್ದಾಗ ಒಂಟಿ ಸಲಗವೊಂದು ಧಾಳಿ ನಡೆಸಿದ ಪರಿಣಾಮ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ಘಟನೆ ಕೂಡ ನಡೆದಿತ್ತು. ದಿನನಿತ್ಯ ಕಾಡಾನೆಗಳ ಹಿಂಡು ನೆಲ್ಯಹುದಿಕೇರಿಯ ಅತ್ತಿಮಂಗಲ, ಅಭ್ಯತ್‍ಮಂಗಲ ಸೇರಿದಂತೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆÉ. ಈ ಹಿನ್ನೆಲೆಯಲ್ಲಿ ಕಾಡಾನೆಗಳ ಹಿಂಡಿನಲ್ಲಿ ಉಪಟಳ ನೀಡುತ್ತಿರುವ ಪುಂಡಾನೆಯೊಂದನ್ನು ಅರಣ್ಯ ಇಲಾಖೆಯು ಕಂಡುಹಿಡಿದಿದ್ದು, ಸೆರೆಹಿಡಿಯಲು ಮುಂದಾಗಿದೆ. ಈಗಾಗಲೇ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲು ಸರಕಾರ ಅನುಮತಿ ನೀಡಿದ್ದು, ನೆಲ್ಯಹುದಿಕೇರಿ ಭಾಗದಲ್ಲಿ ಒಂದು ಕಾಡಾನೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಲಾಗಿದೆ. ಸಿದ್ದಾಪುರ ಸುತ್ತಮುತ್ತಲ ಪ್ರದೇಶದಲ್ಲಿಯೂ ಕೂಡ ಮರಿ ಆನೆ ಸೇರಿದಂತೆ 20ಕ್ಕೂ ಅಧಿಕ ಕಾಡಾನೆಗಳು ದಿನನಿತ್ಯ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಲಗ್ಗೆ ಇಡುತ್ತಿದ್ದು, ಮಿತಿಮೀರಿದ ಕಾಡಾನೆ ಹಾವಳಿಯಿಂದಾಗಿ ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ನೆಮ್ಮದಿ ಇಲ್ಲದಂತಾಗಿದೆ. ಇದೀಗ ಶಾಲಾ ಕಾಲೇಜುಗಳು ಆರಂಭವಾಗಿದ್ದು, ತೋಟದ ಲೈನ್ ಮನೆಗಳಿಂದ ಬರುವ ವಿದ್ಯಾರ್ಥಿಗಳು ಭಯದಿಂದಲೇ ಶಾಲೆಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸರಕಾರ ಹಾಗೂ ಅರಣ್ಯ ಇಲಾಖೆ ಶಾಶ್ವತ ಯೋಜನೆ ರೂಪಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾರ್ಯಾಚರಣೆಗಾಗಿ ದುಬಾರೆಯ ಸಾಕಾನೆಗಳಾದ ಹರ್ಷ, ಧನಂಜಯ, ಲಕ್ಷ್ಮಣ, ಈಶ್ವರ, ಅಜ್ಜಯ್ಯ, ವಿಕ್ರಂ ಈಗಾಗಲೇ ನೆಲ್ಯಹುದಿಕೇರಿಯಲ್ಲಿ ಸಿದ್ಧತೆಯಲ್ಲಿ ತೊಡಗಿಕೊಂಡಿದೆ.
-ಚಿತ್ರ, ವರದಿ: ಎ.ಎನ್ ವಾಸು