ಮಡಿಕೇರಿ, ಮೇ 27: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಶತಮಾನೋತ್ಸವವನ್ನು 2021ರಲ್ಲಿ ಅರ್ಥಪೂರ್ಣವಾಗಿ ಆಚರಿಸುವದ ರೊಂದಿಗೆ, ಜಿಲ್ಲೆಯ ಹಿರಿಯ ಸಹಕಾರಿಗಳ ಮಾರ್ಗದರ್ಶನ ಪಡೆದು, ಸುಸಜ್ಜಿತವಾಗಿ ಶತಮಾನೋತ್ಸವದ ನೆನಪಿನಲ್ಲಿ 5 ಅಂತಸ್ತಿನ ಭವನ ನಿರ್ಮಿಸಲಾಗುವದು ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೂತನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಘೋಷಿಸಿದರು.ಇಂದು ಅಧಿಕಾರ ಸ್ವೀಕಾರ ಬಳಿಕ ಆಡಳಿತ ಮಂಡಳಿ ಸದಸ್ಯರೊಂದಿಗೆ ಮಾಧ್ಯಮಗಳಿಗೆ ಸಂದೇಶ ನೀಡಿದ ಅವರು, ಭವಿಷ್ಯದಲ್ಲಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಜನಸ್ನೇಹಿ ಹಾಗೂ ರೈತಸ್ನೇಹಿ ಧ್ಯೇಯದೊಂದಿಗೆ ಉತ್ತಮ ಗ್ರಾಹಕರ ಸೇವೆಗೆ ಬದ್ಧವೆಂದು ಆಶಯ ವ್ಯಕ್ತಪಡಿಸಿದರು.ಸಭೆಯಲ್ಲಿ ನಿರ್ದೇಶಕರುಗಳಾದ ಉಷಾ ತೇಜಸ್ವಿ, ಪಟ್ರಪಂಡ ರಘು ನಾಣಯ್ಯ, ಕನ್ನಂಡ ಸಂಪತ್, ಕೆ.ಎ. ಜಗದೀಶ್, ಬಿ.ಕೆ. ಚಿಣ್ಣಪ್ಪ, ಕೆ.ಎ. ಸುಬ್ರಮಣಿ, ಎಸ್.ಬಿ. ಭರತ್‍ಕುಮಾರ್, ಎ. ಗೋಪಾಲಕೃಷ್ಣ, ಹಿಂದಿನ ಆಡಳಿತ ಮಂಡಳಿಯ ಎಂ.ಎನ್. ಕುಮಾರಪ್ಪ, ಕೆ.ಎಂ. ಸೋಮಯ್ಯ ಹಾಜರಿದ್ದರು. ಅಧ್ಯಕ್ಷರ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸಿದರು.ಭವಿಷ್ಯದ ಯೋಜನೆಗಳು: ರೈತರಿಗೆ ರಾಜ್ಯ ಸರಕಾರದ ಯೋಜನೆಯಡಿ ಶೂನ್ಯ ಬಡ್ಡಿ ದರದಲ್ಲಿ ಒದಗಿಸಿ ಕೊಡುತ್ತಿರುವ ರೂ. 3 ಲಕ್ಷಗಳ ಅಲ್ಪಾವಧಿ ಬೆಳೆ ಸಾಲದ ಜೊತೆಗೆ; ದೊಡ್ಡ ರೈತರಿಗೆ ಅನುಕೂಲವಾಗ ಲೆಂದು ಬ್ಯಾಂಕಿನ ಸಾಮಾನ್ಯ ಬಡ್ಡಿ ದರದಲ್ಲಿ ರೂ. 60 ಲಕ್ಷಗಳವರೆಗಿನ ಬೆಳೆ ಸಾಲವನ್ನು ನೀಡಲಾಗುವದು ಎಂದು ಅವರು ವಿವರಿಸಿದರು.

(ಮೊದಲ ಪುಟದಿಂದ)

ಕೃಷಿ ಸಾಲ: ಇದೇ ರೀತಿ ಶೆ. 3ರ ಬಡ್ಡಿ ದರದಲ್ಲಿ ರೂ. 10 ಲಕ್ಷಗಳ ವರೆಗಿನ ಮಧ್ಯಮಾವಧಿ ಕೃಷಿ ಸಾಲವನ್ನು ನೀಡುತ್ತಿದ್ದು, ಜಿಲ್ಲೆಯಲ್ಲಿನ ದೊಡ್ಡ ರೈತರುಗಳಿಗೆ ಅನುಕೂಲವಾಗಲೆಂದು; ಗರಿಷ್ಠ ರೂ. 60 ಲಕ್ಷಗಳ ತನಕ ಮಾಧ್ಯಮಾವಧಿ ಕೃಷಿ ಉದ್ದೇಶಿತ ಅಭಿವೃದ್ಧಿ ಸಾಲಗಳಾದ ಕಾಫಿ ಕಣ, ಗೋದಾಮು, ಕೆರೆ ನಿರ್ಮಾಣಕ್ಕಾಗಿ, ತುಂತುರು ನೀರಾವರಿ ಉಪಕರಣ, ಟ್ರ್ಯಾಕ್ಟರ್, ಟಿಲ್ಲರ್ ಖರೀದಿಗಾಗಿ, ಸೋಲಾರ್ ಬೇಲಿ ಮತ್ತು ಸೋಲಾರ್ ಉಪಕರಣಗಳ ಅಳವಡಿಕೆಗಾಗಿ, ಪಾಲಿ ಹೌಸ್ ನಿರ್ಮಾಣಕ್ಕಾಗಿ, ಪಶುಸಂಗೋಪನೆ ಯೋಜನೆಯಡಿ ಹಸು, ಕುರಿ ಮತ್ತು ಹಂದಿ ಸಾಕಾಣೆಗಾಗಿ ಹಾಗೂ ರೈತರ ಅಗತ್ಯತೆಗಾಗಿ ವಿವಿಧ ಸಾಲ ಸೌಲಭ್ಯವನ್ನು ಸಾಮಾನ್ಯ ಬಡ್ಡಿ ದರದಲ್ಲಿ ಒದಗಿಸಲಾಗುವದು ಎಂದರು.

ಆಭರಣ ಸಾಲ: ಹಾಲಿ ಬ್ಯಾಂಕಿನಲ್ಲಿ ಶೇ. 10ರ ಬಡ್ಡಿ ದರದಲ್ಲಿ ವೈಯಕ್ತಿಕ ಗರಿಷ್ಠ ರೂ. 10 ಲಕ್ಷ ಮಿತಿಯ ಆಭರಣ ಈಡಿನ ಸಾಲವನ್ನು ನೀಡಲಾಗುತ್ತಿದೆ. ಇದರೊಂದಿಗೆ ಹಾಲಿ ಆಡಳಿತ ಮಂಡಳಿಯು ವಿನೂತನವಾಗಿ ರೈತರ ಅನುಕೂಲಕ್ಕಾಗಿ ಆರ್.ಟಿ.ಸಿ. ದಾಖಲಾತಿ ಹೊಂದಿರುವವರಿಗೆ ಶೇ. 8.50 ಬಡ್ಡಿ ದರದಲ್ಲಿ ಗರಿಷ್ಠ ರೂ. 5 ಲಕ್ಷಗಳವರೆಗಿನ ಆಭರಣ ಈಡಿನ ಸಾಲವನ್ನು ನೀಡಲು ಚಿಂತನೆ ನಡೆಸಲಾಗುವದು ಎಂದು ಮಾಹಿತಿ ನೀಡಿದರು.

ಮನೆ ಸಾಲ: ಜಿಲ್ಲೆಯ ರೈತರ ಅನುಕೂಲಕ್ಕಾಗಿ ಪರಿವರ್ತಿತ ಸ್ಥಿರಾಸ್ತಿಯ ಆಧಾರದಲ್ಲಿ ಮನೆ ನಿರ್ಮಾಣ, ಮನೆ ಖರೀದಿ, ನಿವೇಶನ ಖರೀದಿ, ಕಟ್ಟಡ ನಿರ್ಮಾಣ, ಕಟ್ಟಡ ಖರೀದಿ, ವಾಣಿಜ್ಯ ಸಂಕೀರ್ಣ ನಿರ್ಮಾಣ ಖರೀದಿಗಾಗಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗರಿಷ್ಠ ರೂ. 60 ಲಕ್ಷಗಳ ವರೆಗಿನ ಸಾಲ ಸೌಲಭ್ಯವನ್ನು ನೀಡಲಾಗುವದು ಎಂದು ವಿವರಿಸಿದರು.

ಪ್ರಸ್ತುತ ನಬಾರ್ಡ್‍ನ ಸಿ.ಎಂ.ಎ. ಮಾನದಂಡದಂತೆ ‘ಎ’ ವರ್ಗೀಕರಣ ಹೊಂದಿರುವ ಬ್ಯಾಂಕುಗಳಿಗೆ ಗರಿಷ್ಠ ರೂ. 60 ಲಕ್ಷಗಳ ಮಿತಿಯ ವೈಯಕ್ತಿಕ ಸಾಲ ನೀಡಲು ಮಾತ್ರ ಅರ್ಹತೆ ಇದ್ದು, ವ್ಯಕ್ತಿಗತವಾಗಿ ಇನ್ನೂ ದೊಡ್ಡ ಮೊತ್ತದ ಸಾಲವನ್ನು ನೀಡಲು ಅನುಕೂಲವಾಗುವಂತೆ ಸದರಿ ಮಾನದಂಡದ ಸಡಿಲಿಕೆಗೆ ಕೋರಿ ನಬಾರ್ಡ್‍ಗೆ ಪತ್ರ ಬರೆಯಲಾಗಿದ್ದು, ಈ ನಿಟ್ಟಿನಲ್ಲಿ ಬ್ಯಾಂಕಿನ ಪ್ರಯತ್ನ ನಡೆಯುತ್ತದೆ ಎಂದು ಅಧ್ಯಕ್ಷರು ವಿವರಿಸಿದರು.

ಸೋಲಾರ್ ಬೇಲಿ: ಜಿಲ್ಲೆಯ ರೈತರ ಅನುಕೂಲಕ್ಕಾಗಿ ವಿವಿಧ ತರಹದ ಸೋಲಾರ್ ಉಪಕರಣಗಳ ಅಳವಡಿಕೆ ಮತ್ತು ಸೋಲಾರ್ ಬೇಲಿ ಅಳವಡಿಕೆಗಾಗಿ ಸ್ಪರ್ಧಾತ್ಮಕ ರಿಯಾಯಿತಿ ಬಡ್ಡಿ ದರದಲ್ಲಿ ಗರಿಷ್ಠ ರೂ. 10 ಲಕ್ಷಗಳವರೆಗಿನ ಸಾಲ ಸೌಲಭ್ಯವನ್ನು ಒದಗಿಸಲಾಗುವದು ಎಂದರು.

ಸರಕಾರದ ಅನುಮತಿಯನ್ನು ಪಡೆದು ಇ-ಸ್ಟಾಂಪಿಂಗ್ ಸೌಲಭ್ಯವನ್ನು ಬ್ಯಾಂಕಿನ ಎಲ್ಲಾ 17 ಶಾಖೆಗಳ ಮುಖಾಂತರ ಒದಗಿಸಲು ಕ್ರಮವಹಿಸಲಾಗುವದು. ಗ್ರಾಹಕರ ಅನುಕೂಲಕ್ಕಾಗಿ ಮೊಬೈಲ್ ಬ್ಯಾಂಕಿಂಗ್ ಮತ್ತು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸಲಾಗುವದಲ್ಲದೆ, ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪದ ಲೆಕ್ಕ ಪದ್ಧತಿಯನ್ನು ಅಳವಡಿಸುವ ಮುಖಾಂತರ ಡಿಸಿಸಿ ಬ್ಯಾಂಕಿನ ಶಾಖೆಗಳಿಗೆ ಲಿಂಕ್ ಮಾಡುವದರೊಂದಿಗೆ, ಗ್ರಾಮಾಂತರ ಪ್ರದೇಶದ ರೈತರಿಗೆ ಆಧುನಿಕ ಬ್ಯಾಂಕಿಂಗ್ ಸೇವೆಗಳಾದ ಆರ್.ಟಿ.ಜಿ.ಎಸ್. ಮತ್ತು ನೆಫ್ಟ್ ಸೇವೆಗಳನ್ನು ತಮ್ಮ ಗ್ರಾಮದ ಸಹಕಾರ ಸಂಘಗಳ ಹಂತದಲ್ಲೇ ಪಡೆಯಲು ಅಗತ್ಯ ಕ್ರಮಗಳನ್ನು ಅನುಸರಿಸಲಾಗುವದು ಎಂದು ಬಾಂಡ್ ಗಣಪತಿ ಸ್ಪಷ್ಟಪಡಿಸಿದರು.

ಸಹಕಾರ ಸಂಘಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಬ್ಯಾಂಕಿನಿಂದ ಧನ ಸಹಾಯವನ್ನು ಒದಗಿಸಲಾಗುವದು ಸೇರಿದಂತೆ 2021ನೇ ಇಸವಿಗೆ ಬ್ಯಾಂಕ್ ಶತಮಾನವನ್ನು ಪೂರೈಸುತ್ತಿರುವ ನಿಟ್ಟಿನಲ್ಲಿ ನೂತನ ಶಾಖೆಗಳನ್ನು ತೆರೆಯುವದರೊಂದಿಗೆ ಹಾಲಿ ಇರುವ ಬ್ಯಾಂಕಿನ ಎಲ್ಲಾ ಶಾಖಾ ಕಟ್ಟಡಗಳನ್ನು ಸುಸಜ್ಜಿತಗೊಳಿಸಿ ಮೇಲ್ದರ್ಜೆಗೇರಿಸಿ, ಗ್ರಾಹಕರ ಅನುಕೂಲಕ್ಕಾಗಿ ಎಲ್ಲಾ ರೀತಿಯ ಆಧುನಿಕ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸಲು ಕ್ರಮವಹಿಸಲಾಗುವದು ಎಂದರು. ಬ್ಯಾಂಕಿನ ಕೇಂದ್ರ ಕಚೇರಿಯ ಆವರಣದಲ್ಲಿ ಸುಸಜ್ಜಿತವಾದ 5 ಅಂತಸ್ತಿನ ಶತಮಾನೋತ್ಸವ ಕಟ್ಟಡವನ್ನು ಕಟ್ಟುವ ಮುಖಾಂತರ ಯಾವದೇ ವಾಣಿಜ್ಯ ಬ್ಯಾಂಕಿಗೂ ಕಡಿಮೆ ಇಲ್ಲದಂತೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅನ್ನು ಮುಂಚೂಣಿಯಲ್ಲಿ ಕೊಂಡೊಯ್ಯಲು ಅಗತ್ಯ ಪ್ರಯತ್ನ ಮಾಡಲಾಗುವದೆಂದು ನೂತನ ಅಧ್ಯಕ್ಷರು ಆಶಯ ವ್ಯಕ್ತಪಡಿಸಿದರು.