ಮಡಿಕೇರಿ, ಮೇ 27: ‘ನಮ್ಮ ಮನೆ ಭಾಗಶಃ ಬಿದ್ದು ಹೋಗಿದೆ; ಕೊಟ್ಟಿಗೆ ಹಾನಿಯಾಗಿದೆ; ಕಾಫಿ ತೋಟದ ಫಸಲು ಸಂಪೂರ್ಣ ಹಾನಿಯಾಗಿತ್ತು; ಭತ್ತದ ಗದ್ದೆಗಳು ಜಲಾವೃತಗೊಂಡು ಫಸಲು ಕೈಗೆ ಎಟುಕಲಿಲ್ಲ; ಸಂಪರ್ಕ ಮಾರ್ಗವಿಲ್ಲ; ನೀರಿನ ಸಮಸ್ಯೆ ಎದುರಾಗಿದೆ; ಮಕ್ಕಳ ಶಿಕ್ಷಣಕ್ಕೆ ತೊಡಕಾಗಿದೆ; ಸ್ವಾಮಿ.., ಭವಿಷ್ಯದ ಜೀವನ ನೆನಪಿಸಿಕೊಂಡರೆ ಭಯವಾಗುತ್ತಿದೆ; ಅರ್ಜಿ ಹಿಡಿದುಕೊಂಡು ನಷ್ಟ ಪರಿಹಾರಕ್ಕಾಗಿ ಅಲ್ಲಿ - ಇಲ್ಲಿ ಅಲೆದು ಸಾಕಾಗಿದೆ... ನೀವೇ ನೋಡಿ’... ಎಂದು ಅನೇಕರು ಪರಸ್ಪರ ಅಳಲು ತೋಡಿಕೊಂಡರು.
ಇಲ್ಲಿನ ಜಿಲ್ಲಾ ಆಡಳಿತ ಭವನದಲ್ಲಿ ಇಂದಿನಿಂದ ಮೂರು ದಿವಸ ಆಯೋಜಿಸಿರುವ, ಪ್ರಾಕೃತಿಕ ವಿಕೋಪ ನಷ್ಟ ಪರಿಹಾರ ಅದಾಲತ್‍ಗೆ ನೂರಾರು ಸಂಖ್ಯೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಜನತೆಯ ಅಳಲು ಇದಾಗಿತ್ತು. ಬಹು ಮಂದಿಯ ಮೊಗದಲ್ಲಿ ಕಳೆಗುಂದಿದ ಆತಂಕ, ದುಗುಢÀ, ದುಮ್ಮಾನ ಎದ್ದು ಕಾಣುತ್ತಿತ್ತು. ಈ ಹಿಂದೆ ಆಯಾ ಗ್ರಾಮ ಪಂಚಾಯಿತಿ, ತಾಲೂಕು ಕಚೇರಿಗಳಿಗೆ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು, ನಕಲು ಪ್ರತಿಯೊಂದಿಗೆ ಬಂದಿದ್ದರು. ಪ್ರತಿಯೊಬ್ಬರು ಕುಗ್ಗಿದ ಉತ್ಸಾಹ, ತಗ್ಗಿದ ದನಿಯೊಂದಿಗೆ ಗಂಟೆಗಟ್ಟಲೆ ಸರದಿಯಲ್ಲಿ ನಿಂತು; ಅವಕಾಶ ಲಭಿಸಿದಾಗ ಸಂಬಂಧಪಟ್ಟವರ ಬಳಿ ತಮ್ಮ ತಮ್ಮ ನೋವನ್ನು ಹಂಚಿಕೊಂಡರು.
ಗ್ರಾಮ ಲೆಕ್ಕಿಗರಿಂದ ಬ್ಯಾಂಕ್‍ಗೆ : ಇದುವರೆಗೆ ಪರಿಹಾರ ಲಭಿಸದಿರುವ ಬಗ್ಗೆ ಕಾರಣ ಕೇಳಿದರು ಬ್ಯಾಂಕ್ ಖಾತೆಗಳಿಗೆ ಹಣ ಜಮೆಗೊಂಡಿದೆ ಎಂದು ಆಯ ಗ್ರಾ.ಪಂ. ವ್ಯಾಪ್ತಿಯ ಗ್ರಾಮ ಲೆಕ್ಕಿಗರು ಹೇಳಿ ಕಳುಹಿಸುತ್ತಿದ್ದಾರೆ; ಬ್ಯಾಂಕ್‍ಗಳಲ್ಲಿ ತೆರಳಿ ತಮ್ಮ ಖಾತೆ ಪರಿಶೀಲನೆ ನಡೆಸಿದರೆ, ಯಾವ ಹಣ ಬಂದಿಲ್ಲವೆಂದು ಬ್ಯಾಂಕ್ ಸಿಬ್ಬಂದಿ ಗದರಿಸಿ ಕಳುಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತ್ಯಕ್ಷ ಪರಿಶೀಲನೆ : ಈ ದೂರುದಾರರ ಅಳಲು ಆಲಿಸಿದ ಕಂದಾಯ ಅಧಿಕಾರಿಗಳು, ಅಂತಹವರ ಸಮ್ಮುಖ ಗಣಕ ಯಂತ್ರದ ಮೂಲಕ ಪರಿಶೀಲನೆ ನಡೆಸಲಾಗಿ, ಕೆಲವರ ಖಾತೆಗೆ ಅಲ್ಪ ಸ್ವಲ್ಪ ಹಣ ಬಂದಿದ್ದರೆ, ಅನೇಕರ ಖಾತೆಗಳಿಗೆ ಹಣ ಸಂದಾಯವಾಗಿಲ್ಲವೆಂಬ ಉತ್ತರದೊಂದಿಗೆ ಮರು ಅರ್ಜಿ ಸಲ್ಲಿಸಲು ಸಲಹೆ ಕೇಳಿ ಬಂತು.
ಈ ಸಂದರ್ಭ ಕೆಲವರು ತಾವು ಸಲ್ಲಿಸಿದ್ದ ಹಳೆ ಅರ್ಜಿಗಳ ನಕಲು ನೀಡಿ ಮರು ಪರಿಹಾರಕ್ಕೆ ಬೇಡಿಕೆ ಸಲ್ಲಿಸುವದು ಕಂಡು ಬಂತು. ಎಲ್ಲವನ್ನು ಮೇಲಧಿಕಾರಿಗಳ ನಿರ್ದೇಶನದಂತೆ ನಿಯೋಜಿತ ಸಿಬ್ಬಂದಿ ಶಾಂತಚಿತ್ತರಾಗಿ ಪರಿಶೀಲಿಸಿ ಅಗತ್ಯ ಸಲಹೆ ನೀಡಿ ಅಲ್ಲಿಂದ ಸಂಬಂಧಪಟ್ಟವರನ್ನು ಕಳುಹಿಸಿಕೊಡುತ್ತಿದ್ದ ದೃಶ್ಯ ಎದುರಾಯಿತು.
ಉತ್ತರ ಕೊಡಗಿನ ಕೊಡ್ಲಿಪೇಟೆ, ಶನಿವಾರಸಂತೆ, ಶಾಂತಳ್ಳಿ, ಸೂರ್ಲಬ್ಬಿ, ಮುಟ್ಲು, ಗರ್ವಾಲೆ, ಮಾದಾಪುರ, ಮುಕ್ಕೋಡ್ಲು, ಕಾಲೂರು, ಮೊಣ್ಣಂಗೇರಿ ಸೇರಿದಂತೆ ದಕ್ಷಿಣ ಕೊಡಗಿನ ಬಿರುನಾಣಿ, ಕುಟ್ಟ, ಶ್ರೀಮಂಗಲ, ಕಾನೂರು, ಬಾಳೆಲೆ ಸಹಿತ ಇತೆರಡೆಗಳಿಂದ ಸಾಮಾನ್ಯ ಕೃಷಿಕರು, ಬೆಳೆಗಾರರು ಸೇರಿದಂತೆ ಸಂತ್ರಸ್ತರ ದಂಡು ಜಿಲ್ಲಾಡಳಿತ ಭವನದತ್ತ ಹರಿದು ಬಂದಿತ್ತು.
ಯಾವದೇ ಆತಂಕ, ಗೊಂದಲಕ್ಕೆ ಅವಕಾಶವಾಗದಂತೆ ತಾ. 28 ರಂದು (ಇಂದು) ಹಾಗೂ ತಾ. 29 (ನಾಳೆ) ಈ ಅದಾಲತ್‍ನಲ್ಲಿ ಭಾಗವಹಿಸಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಉಪವಿಭಾಗಾಧಿಕಾರಿ ಜವರೇಗೌಡ ಅವರು ಸಲಹೆ ನೀಡಿದರು. ತಹಶೀಲ್ದಾರ್‍ರಾದ ನಟೇಶ್, ಗೋವಿಂದರಾಜು ಮೊದಲಾದವರು ಮೇಲುಸ್ತುವಾರಿ ನೋಡಿಕೊಂಡರೆ, ಪೊಲೀಸರ ನಿಯೋಜನೆಯಡಿ ಶಾಂತಿಯುತವಾಗಿ ಕಾರ್ಯಕ್ರಮ ಸಾಗುವಂತಾಯಿತು.