ಗೋಣಿಕೊಪ್ಪಲು, ಮೇ 28: ಗೋಣಿಕೊಪ್ಪ ಗ್ರಾ.ಪಂ.ಯ ಓರ್ವ ಸದಸ್ಯನ ಕುಮ್ಮಕ್ಕಿನಿಂದಾಗಿ ಪಂಚಾಯ್ತಿ ಅಧ್ಯಕ್ಷೆ ಕಸ ವಿಲೇವಾರಿ ಕಡತಕ್ಕೆ ಸಹಿ ಹಾಕದೆ ಕಳೆದ ಐದು ದಿನಗಳಿಂದ ಸತಾಯಿಸುತ್ತಿರುವ ಬೆಳವಣಿಗೆ ಗೋಣಿಕೊಪ್ಪ ಪಂಚಾಯಿತಿಯಲ್ಲಿ ನಡೆದಿದೆ. ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕಡತಕ್ಕೆ ಸಹಿ ಮಾಡುವಂತೆ ಮನವಿ ಮಾಡಿದರೂ ಅಧ್ಯಕ್ಷರು ಮೌನವಾಗಿದ್ದಾರೆ.
ಯಾವದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಒಮ್ಮತದ ನಿರ್ಧಾರ ಕೈಗೊಂಡರೂ ಸಭೆ ಮುಗಿದ ನಂತರ ಇಂತಹ ವಿಷಯದಲ್ಲಿ ಮತ್ತೆ ವಿಳಂಬ ಧೋರಣೆ ನಡೆಯುತ್ತಿದೆ.
ಇತ್ತಿಚೆಗೆ ಗೋಣಿಕೊಪ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿನ ಕಸ ವಿಲೇವಾರಿಗೆ ಸಂಬಂಧಪಟ್ಟಂತೆ ಗೋಣಿಕೊಪ್ಪ ಚೇಂಬರ್ ವತಿಯಿಂದ ಆಯ್ದ ಗ್ರಾ.ಪಂ. ಸದಸ್ಯರ ಸಭೆ ನಡೆಸಿ ಕಸ ವಿಲೇವಾರಿಗೆ ಟೆಂಡರ್ ನೀಡುವ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡಿತ್ತು. ಸಭೆಯಲ್ಲಿ ಸದಸ್ಯರು ಪಕ್ಷ ಭೇದವಿಲ್ಲದೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿ ಸಭೆಯಿಂದ ಹೊರ ನಡೆದಿದ್ದರು. ನಂತರ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕಸ ವಿಲೇವಾರಿಯ ಬಗ್ಗೆ ಸಮಗ್ರ ಚರ್ಚೆ ನಡೆಸಿ ಅಂತಿಮವಾಗಿ ಕಸ ವಿಲೇವಾರಿ ಯನ್ನು ಟೆಂಡರ್ ಮೂಲಕ ನೀಡುವ ಬಗ್ಗೆ ಸರ್ವ ಸದಸ್ಯರು ಒಪ್ಪಿಗೆ ನೀಡಿ ನಿಯಾಮಾವಳಿ ಹಾಗೂ ತುರ್ತು ಕೆಲಸದ ಬಗ್ಗೆ ಕ್ರಮ ಕೈಗೊಳ್ಳಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರಿಗೆ ಸಭೆಯು ಒಮ್ಮತದ ಅಧಿಕಾರ ನೀಡಿತು. ನಿಯಾಮವಳಿಯಂತೆ ಟೆಂಡರ್ ಕರೆಯಲು ಪ್ರಕಟಣೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ಈ ವಿಷಯದಲ್ಲಿ ಕಾಗದ ಪತ್ರಗಳಿಗೆ ಸಹಿ ಮಾಡಬೇಕಾದ ಅಧ್ಯಕ್ಷರು ಸತತ ಒಂದು ವಾರಗಳ ಕಾಲ ಕಡತವನ್ನು ತನ್ನ ಬಳಿಯೇ ಇಟ್ಟುಕೊಂಡು ಸಹಿ ಮಾಡದೆ ಸತಾಯಿಸುತ್ತಿರುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಇಂದು ನಾಳೆ ಸಹಿ ಮಾಡಬಹುದೆಂಬ ವಿಶ್ವಾಸದಲ್ಲಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಟೆಂಡರ್ ದಿನಾಂಕದವರೆಗೆ ಅಧ್ಯಕ್ಷರು ಕಡತಕ್ಕೆ ಸಹಿ ಮಾಡದ ಹಿನ್ನೆಲೆಯಲ್ಲಿ ಈ ವಿಚಾರವೂ ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಅಧ್ಯಕ್ಷರು ಸಹಿಗೆ ಮುಂದಾದರೂ ಓರ್ವ ಸದಸ್ಯ ಇವರನ್ನು ಸಹಿ ಮಾಡದಂತೆ ನಿಯಂತ್ರಿಸುತ್ತಿರುವದಾಗಿ ತಿಳಿದು ಬಂದಿದೆ.
ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ ಹಲವು ಸಭೆಗಳನ್ನು, ಅಧಿಕಾರಿಗಳನ್ನು ಭೇಟಿ ಮಾಡಿ ಕಸಮುಕ್ತ ನಗರವನ್ನಾಗಿ ಮಾರ್ಪಾಡು ಮಾಡುವಂತೆ ಚಿಂತನೆ ನಡೆಸಿದ್ದರು. ಪಂಚಾಯಿತಿಯ ಆಡಳಿತ ವೈಖರಿಯ ಬಗ್ಗೆ ಬೇಸರಗೊಂಡಿದ್ದರು.
ಕಡತಕ್ಕೆ ಸಹಿ ಮಾಡದ ಹಿನ್ನೆಲೆಯ ವಿಷಯವು ಜಿ.ಪಂ. ಸದಸ್ಯರ ಗಮನಕ್ಕೆ ಬರುತ್ತಿದ್ದಂತೆಯೇ, ಸಾರ್ವಜನಿಕ ವಲಯದಲ್ಲಿನ ಬಹುದೊಡ್ಡ ಸಮಸ್ಯೆ ಆದ ಕಸವಿಲೇವಾರಿ ವಿಷಯದಲ್ಲಿ ಟೆಂಡರ್ ಪ್ರಕ್ರಿಯೆ ಕಡತಕ್ಕೆ ಸಹಿ ಮಾಡುವಂತೆ ಸೂಚನೆ ನೀಡಿದ್ದರು. ಆದರೂ ಅಧ್ಯಕ್ಷರೂ ಕಡತಕ್ಕೆ ಸಹಿ ಮಾಡುವ ಪ್ರಯತ್ನಕ್ಕೆ ಹಿಂದೇಟು ಹಾಕುತ್ತಿರುವದರ ಹಿಂದಿನ ಮರ್ಮ ತಿಳಿಯುತ್ತಿಲ್ಲ.
-ಹೆಚ್.ಕೆ. ಜಗದೀಶ್