ಅಮ್ಮತ್ತಿ, ಮೇ 28: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ವತಿಯಿಂದ ಅಮ್ಮತ್ತಿ ಗ್ರಾಮದ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ 15 ನೇ ವರ್ಷದ ಜಿಲ್ಲಾ ಫುಟ್ಬಾಲ್ ಲೀಗ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಒಂಟಿಯಂಗಡಿ ಸಹರಾ ತಂಡ ಮುನ್ನಡೆ ಸಾಧಿಸಿದೆ. ಇಂದು ಬೆಳಗ್ಗೆ ನಡೆದ ಡಿ ಗುಂಪಿನ ಉದ್ಘಾಟನಾ ಪಂದ್ಯದಲ್ಲಿ ಸಹರಾ ತಂಡ, ಮರಗೋಡು ವೈಷ್ಣವಿ ತಂಡವನ್ನು 3-2 ಗೋಲುಗಳಿಂದ ಮಣಿಸಿ ಮೂರು ಅಂಕ ಸಂಪಾದಿಸಿ ಕೊಂಡಿತು. ಮೊದಲಾರ್ಧದಲ್ಲಿ ಚುರುಕಿನ ಆಟವಾಡಿದ ಸಹರಾ ತಂಡ, ಆಕರ್ಷಕ ಪಾಸ್ಗಳ ಮೂಲಕ ಗಮನ ಸೆಳೆಯಿತು. ಪಂದ್ಯದ ನಾಲ್ಕನೇ ನಿಮಿಷದಲ್ಲೇ ಗೋಲು ಗಳಿಸಿದ ಸಹರಾ ತಂಡದ ರಮೇಶ್ 10ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ತಂಡಕ್ಕೆ ಎರಡು ಗೋಲುಗಳ ಮುನ್ನಡೆ ದೊರಕಿಸಿಕೊಟ್ಟರು. ಆದರೆ ಎದುರಾಳಿ ತಂಡದ ಮಂಜು 14 ನೇ ನಿಮಿಷದಲ್ಲಿ ಚುರುಕಿನ ಗೋಲುಗಳಿಸಿ ಅಂತರವನ್ನು 2-1ಕ್ಕೆ ತಗ್ಗಿಸಿದರು. ದ್ವಿತೀಯಾರ್ಧದಲ್ಲಿ ವೈಷ್ಣವಿ ತಂಡದ ಸುಜಯ್ ಸುಮಾರು 30 ಯಾರ್ಡ್ ಗಳ ದೂರದಿಂದ ಒದ್ದ ಚೆಂಡು ರಾಕೆಟ್ ವೇಗದಲ್ಲಿ ಗೋಲುಪೆಟ್ಟಿಗೆ ಸೇರಿತು. ಇದರೊಂದಿಗೆ ವೈಷ್ಣವಿ ತಂಡ ಸಮಬಲ ಸಾಧಿಸಿ ಪಂದ್ಯದಲ್ಲಿ ಪಾರಮ್ಯ ಮೆರೆಯಿತು. ಆದರೆ ಪಂದ್ಯ ಮುಗಿಯಲು ಕೆಲವೇ ಕ್ಷಣಗಳಿದ್ದಾಗ ಸಹರಾ ತಂಡದ ಧೀರಜ್ ಬಾಲನ್ನು ಹೆಡ್ ಮಾಡುವ ಮೂಲಕ ಗೋಲುಗಳಿಸಿ ಜಯದ ರೂವಾರಿಯಾದರು.
ಎ ಗುಂಪಿನಲ್ಲಿ ನಡೆದ ದಿನದ ಎರಡನೇ ಪಂದ್ಯದಲ್ಲಿ ಯಂಗ್ ಇಂಡಿಯಾ ಪಾಲಿಬೆಟ್ಟ ತಂಡ ಸಿಟಿ ಯುನೈಟೆಡ್ ಸುಂಟಿಕೊಪ್ಪ ತಂಡವನ್ನು 5-0 ಗೋಲುಗಳಿಂದ ಮಣಿಸಿ ಪೂರ್ಣ ಅಂಕ ಸಂಪಾದಿಸಿತು.
ಹೆಚ್.ಎಫ್.ಸಿ. ಹಳ್ಳಿಗಟ್ಟು ಹಾಗೂ ರಂಗಸಮುದ್ರ ತಂಡಗಳ ನಡುವಿನ ಪಂದ್ಯ ಮಿಲನ್ಸ್ ಅಮ್ಮತ್ತಿ ಹಾಗೂ ಅಕ್ಸ್ಫರ್ಡ್ ವೀರಾಜಪೇಟೆ ಮತ್ತು ಬಿವೈಸಿ ಹಾಲುಗುಂದ ಹಾಗೂ ಪನ್ಯ ಸುಂಟಿಕೊಪ್ಪ ತಂಡಗಳ ನಡುವಿನ ಪಂದ್ಯಗಳು ತಲಾ 1-1 ಗೋಲಿನಿಂದ ಸಮಾನಂತರ ಕಂಡಿವೆ.
ಇದಕ್ಕೂ ಮೊದಲು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಬಾಲ್ ಒದೆಯುವ ಮೂಲಕ ಉದ್ಘಾಟನಾ ಪಂದ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಗುಡ್ಡೆಹೊಸೂರು ಐಚೆಟ್ಟಿರ ನರೇನ್ ಸುಬ್ಬಯ್ಯ ಸ್ಪೋಟ್ರ್ಸ್ ಫೌಂಡೇಷನ್ ಸಂಸ್ಥಾಪಕ ಐಚೆಟ್ಟಿರ ಸೋಮಯ್ಯ, ಫುಟ್ಬಾಲ್ ಸಂಸ್ಥೆ ರಾಜ್ಯ ಪ್ರತಿನಿಧಿ ಜಗದೀಶ್ ಪಿ.ಕೆ., ಖಜಾಂಜಿ ದೀಪು ಮಾಚಯ್ಯ, ಮಾಜಿ ಕಾರ್ಯದರ್ಶಿ ಬಿ.ಸಿ. ದಿನೇಶ್, ರೆಫ್ರಿ ಅಸೋಸಿ ಯೇಷನ್ ಅಧ್ಯಕ್ಷ ಪಂದಿಕಂಡ ಈಶ್ವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.