ಗೋಣಿಕೊಪ್ಪಲು, ಮೇ 28: ತಿತಿಮತಿ ಪಂಚಾಯ್ತಿ ವ್ಯಾಪ್ತಿಯ ಮರಪಾಲ ಸಮೀಪದ ನರವತ್ತು ಎಸ್ಟೇಟ್‍ನಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಹುಲಿಯೊಂದು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆಯು ಹುಲಿಯ ಚಲನ ವಲನದ ಬಗ್ಗೆ ನಿಗಾ ವಹಿಸಲು ತೋಟದಲ್ಲಿಟ್ಟಿದ್ದ ಸಿಸಿ ಕ್ಯಾಮೆರಾದಲ್ಲಿ ಹುಲಿ ಚಿತ್ರ ಸೆರೆ ಆಗಿದೆ.
ವಿಪರ್ಯಾಸವೆಂದರೆ ಅರಣ್ಯ ಇಲಾಖೆಯು ಈ ಹುಲಿಯನ್ನು ಸೆರೆ ಹಿಡಿವ ಪ್ರಯತ್ನ ಮಾಡಲೇ ಇಲ್ಲ. ಪ್ರತಿ ದಿನ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಹುಲಿಯ ಚಿತ್ರಗಳನ್ನು ಹಿರಿಯ ಅಧಿಕಾರಿಗಳಿಗೆ ನೀಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ನಂತರ ರಾತ್ರಿಯ ವೇಳೆಯಲ್ಲಿ ಹುಲಿಯು ಮತ್ತೆ ಜಾನುವಾರುಗಳ ಮೇಲೆ ದಾಳಿ ನಡೆಸಬಹುದೆಂಬ ಭಯದಿಂದ ಹುಲಿಯನ್ನು ತೋಟದಿಂದ ಕಾಡಿನತ್ತ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇತ್ತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ರೈತ ಮುಖಂಡರು ತೆರಳಿ ಘಟನಾ ಸ್ಥಳದಲ್ಲಿ ಹುಲಿ ಸೆರೆಗೆ ಹುಲಿ ಬೋನಿಡುವಂತೆ ಆಗ್ರಹಿಸಲಾಗಿತ್ತು. ಇವರ ಒತ್ತಡಕ್ಕೆ ಮಣಿದ ತಿತಿಮತಿ ಎಸಿಎಫ್ ಶ್ರೀಪತಿ ನಡುರಾತ್ರಿಯಲ್ಲಿ ಹುಲಿ ಬೋನು ತರಿಸಿ ಇಟ್ಟರಾದರೂ ಇದು ಕೇವಲ ಜನರ ಕಣ್ಣೋರೆಸುವ ತಂತ್ರಕಷ್ಟೆ ಮೀಸಲಾಗಿತ್ತು. ಹುಲಿ ಬೋನಿನೊಳಗೆ ಮಾವಿನ ಸೊಪ್ಪನ್ನು ಹಾಕುವ ಮೂಲಕ ಹುಲಿ ಸೆರೆಗೆ ಪ್ರಯತ್ನ ನಡೆಸಿದ್ದರು. ಈ ವಿಚಾರವು ನಾಗರಿಕರಿಗೆ ತಿಳಿಯುತ್ತಿದ್ದಂತೆಯೇ ಬೋನಿನಲ್ಲಿ ಸೊಪ್ಪಿನ ಬದಲು ಮಾಂಸವನ್ನು ತಂದಿಟ್ಟಿದ್ದರು. ಪ್ರತಿ ದಿನವು ಹುಲಿಯ ಸಂಚಾರವು ತೋಟದ ಆವರಣದಲ್ಲಿ ಕಂಡು ಬಂದಿದ್ದರಿಂದ ಕಾರ್ಮಿಕರು ತೋಟದಲ್ಲಿ ಕೆಲಸ ನಿರ್ವಹಿಸಲು ಹಿಂದೇಟು ಹಾಕಿದರು. ತದ ನಂತರ ತೋಟದ ಮಾಲೀಕರು, ಕಾರ್ಮಿಕರು ಅರಣ್ಯ ಇಲಾಖೆಗೆ ಒತ್ತಡ ಹಾಕುತ್ತಿ ದ್ದಂತೆಯೇ, ಅರಣ್ಯ ಸಿಬ್ಬಂದಿಗಳು ತೋಟದಲ್ಲಿ ಹುಲಿ ಚಲನವಲನದ ಬಗ್ಗೆ ಸಿಸಿ ಕ್ಯಾಮೆರಾ ಅಳವಡಿಸಿ ಹುಲಿಯ ಸಂಚಾರವನ್ನು ತಿಳಿಯುವ ಪ್ರಯತ್ನ ಮಾಡಿದರು. ಸಿಸಿ ಕ್ಯಾಮೆರಾದಲ್ಲಿ ಹುಲಿಯ ಸಂಚಾರದ ಬಗ್ಗೆ ದೃಢಪಟ್ಟರೂ ಹಿರಿಯ ಅಧಿಕಾರಿಗಳು ಹುಲಿಯನ್ನು ಹಿಡಿಯುವ ಪ್ರಯತ್ನಕ್ಕೆ ಹಿಂದೇಟು ಹಾಕಿದರು. ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ಹುಲಿಯ ಸಂಚಾರದ ಬಗ್ಗೆ ಮಾಹಿತಿ ಇಲ್ಲ ಎಂಬ ಸುಳ್ಳನ್ನು ಹೇಳುವ ಪ್ರಯತ್ನ ನಡೆಸಿದರು. ಇವರ ಮಾತನ್ನು ನಿರಾಕರಿಸಿದ ಕಾರ್ಮಿಕರು ತೋಟದಲ್ಲಿ ಹುಲಿ ಸಂಚಾರದ ಕುರುಹುಗಳಾಗಿ ಹುಲಿ ಹೆಜ್ಜೆಗಳನ್ನು ತೋರಿಸಿದ ನಂತರ ಅರಣ್ಯ ಸಿಬ್ಬಂದಿಗಳು ಸುಮ್ಮನಾಗಿದ್ದರು. ಭಾನುವಾರ ಸಂಜೆಯ ವೇಳೆ ಕಾರ್ಮಿಕರಿಗೆ ಹುಲಿ ಎದುರಾದ ನಂತರ 15ಕ್ಕೂ ಅಧಿಕ ಸಿಬ್ಬಂದಿಗಳು ತೋಟಕ್ಕೆ ತೆರಳಿ ತೋಟದಲ್ಲಿ ಸಂಚರಿಸುತ್ತಿದ್ದ ಹುಲಿಯನ್ನು ಬೆದರಿಸಿ ಕಾಡಿಗೆ ಕಳುಹಿಸಿದ್ದಾರೆ. ಇಲ್ಲಿಯ ತನಕ ಹುಲಿಯು ತನ್ನ ವಾಸಸ್ಥಳವಾಗಿ ತೋಟವನ್ನು ಆಕ್ರಮಿಸಿದ್ದರೂ ಇತ್ತ ಅರಣ್ಯ ಸಿಬ್ಬಂದಿಗಳು ಹುಲಿ ಸೆರೆಗೆ ಪ್ರಯತ್ನ ನಡೆಸಲೇ ಇಲ್ಲ. ಪ್ರತಿ ನಿತ್ಯ 50ಕ್ಕೂ ಅಧಿಕ ತೋಟದ ಕಾರ್ಮಿಕರು ಮುಂಜಾನೆ ತೋಟಕ್ಕೆ ತೆರಳುವ ಸಂದರ್ಭ ಹುಲಿ ತೋಟದಲ್ಲಿ ಅಡಗಿರುವ ಸಂಶಯದಿಂದ ಪಟಾಕಿ ಸಿಡಿಸಿ ನಂತರವೇ ತಮ್ಮ ದೈನಂದಿನ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಭಯದ ವಾತಾವರಣದಲ್ಲಿಯೇ ದಿನ ಕಳೆಯುವ ಪರಿಸ್ಥಿತಿ ಇಲ್ಲಿನ ಕಾರ್ಮಿಕರದ್ದಾಗಿದೆ.
ನಿರಂತರವಾಗಿ ತೋಟದಲ್ಲಿ ಹುಲಿಯ ಸಂಚಾರವಿದ್ದರೂ ಹುಲಿ ಸೆರೆಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರುಗಳಾದ ಬಲ್ಯಮೀದೇರಿರ ಪ್ರವೀಣ್ ಮುಂದಾಳತ್ವದಲ್ಲಿ ರೈತ ಮುಖಂಡರಾದ ಪುಚ್ಚಿಮಾಡ ಸಂತೋಷ್, ಕಿಶೋರ್, ಆಲೇಮಾಡ ಮಂಜುನಾಥ್, ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮುಂತಾದವರು ತೆರಳಿ ಕೂಡಲೇ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
- ಹೆಚ್.ಕೆ. ಜಗದೀಶ್