ಕರಿಕೆ, ಮೇ 28: ಇಲ್ಲಿಗೆ ಸಮೀಪದ ಚೆತ್ತುಕಾಯ ಶ್ರೀ ವನಶಾಸ್ತಾವು ದೇವಾಲಯದ ಪ್ರತಿಷ್ಠಾ ವಾರ್ಷಿಕ ಪೂಜೆ ಕಾರ್ಯಕ್ರಮ ಜರುಗಿತು. ಇದಕ್ಕೂ ಮೊದಲು ಬೇಕಲ್ ವಿಷ್ಣು ಮೂರ್ತಿ ದೇವಸ್ಥಾನದಿಂದ ವಾದ್ಯಗೋಷಿ ್ಠಯೊಂದಿಗೆ ಗ್ರಾಮದ ಹಾಗೂ ವಿವಿಧ ಸಂಘ-ಸಂಸ್ಥೆಗಳ ಮಹಿಳೆಯರು ತಲೆ ಹೊರೆಯಲ್ಲಿ ಹಸಿರು ಕಸಣಿಕೆಯನ್ನು ಹೊತ್ತುತಂದು ದೇವರಿಗೆ ಸಮರ್ಪಿಸಿದರು.

ಕ್ಷೇತ್ರದ ಅರ್ಚಕ ಗೌರಿಶಂಕರ ಭಟ್ ನೇತೃತ್ವದಲ್ಲಿ ಶ್ರೀ ವನಶಾಸ್ತಾವು ಹಾಗೂ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ಈ ಸಂದರ್ಭ ಕ್ಷೇತ್ರದ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಭಜನಾ ಮಂದಿರವನ್ನು ಕೆಡವಿ ನೂತನವಾಗಿ ನಿರ್ಮಿಸಲಾದ ಭಜನಾ ಮಂದಿರದಲ್ಲಿ ದೇವ ಪ್ರತಿಷ್ಠಾಪನೆ ಮಾಡಲಾಯಿತು. ಇದಕ್ಕೂ ಮೊದಲು ಕ್ಷೇತ್ರದ ಅರ್ಚಕರಾದ ಶ್ಯಾಮ್ ಭಟ್, ಗೌರಿಶಂಕರ ಭಟ್ಟ್ ನೇತೃತ್ವದ ಅರ್ಚಕರ ತಂಡದಿಂದ ವಾಸ್ತು ಹೋಮ, ಗಣ ಹೋಮ ಸೇರಿದಂತೆ ಇತರ ದೈವಿಕ ಕೈಂಕರ್ಯ ನೆರವೇರಿಸಿದರು. ನಂತರ ವಿವಿಧ ಭಜನಾ ಮಂಡಳಿಯಿಂದ ಭಜನೆ ನೆರವೇರಿದವು. ಈ ಸಂದರ್ಭದಲ್ಲಿ ದೇವಾಲಯದ ಅಧ್ಯಕ್ಷ ಕೆ.ಎ. ನಾರಾಯಣ, ಉಪಾಧ್ಯಕ್ಷ ಕೆ.ಡಿ. ಬಾಲಕೃಷ್ಣ, ಕಾರ್ಯದರ್ಶಿ ತಾರೇಶ ಹೊದ್ದೆಟ್ಟಿ, ಸಮಿತಿ ಸದಸ್ಯರಾದ ದೇವರಾಜ್, ಅಜಯ್ ಇತರ ಸದಸ್ಯರು, ಪದಾಧಿಕಾರಿಗಳು, ಮಹಿಳಾ ಸಮಿತಿಯವರು ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು.