ಕುಶಾಲನಗರ, ಮೇ 28: ವಾಣಿಜ್ಯ ಕಟ್ಟಡಗಳಿಂದ ನೇರವಾಗಿ ಚರಂಡಿಗೆ ಕಲುಷಿತ ತ್ಯಾಜ್ಯಗಳನ್ನು ಹರಿಸುತ್ತಿರುವ ಕಟ್ಟಡದ ಪರವಾನಗಿ ಕೂಡಲೆ ರದ್ದು ಮಾಡಲು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ ಉಪ ಪರಿಸರ ಅಧಿಕಾರಿ ಡಾ.ಸುಧಾ ಸ್ಥಳೀಯ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕುಶಾಲನಗರ ಹೆದ್ದಾರಿ ರಸ್ತೆಯ ಚರಂಡಿಗೆ ಕೆಲವು ಬಹುಮಹಡಿ ಕಟ್ಟಡ, ಲಾಡ್ಜ್ ಗಳಿಂದ ನೇರವಾಗಿ ಕಲುಷಿತ ನೀರು ಬಿಡುತ್ತಿದ್ದು ಸ್ಥಳೀಯ ಜನರ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ನಂತರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಕಟ್ಟಡಗಳ ಕಲುಷಿತ ನೀರನ್ನು ಸಂಸ್ಕರಣಾ ಘಟಕಗಳ ಮೂಲಕ ಶುದ್ಧೀಕರಿಸಿ ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಅಂತಹ ಕಟ್ಟಡಗಳಿಗೆ ಯಾವದೇ ರೀತಿಯ ಪರವಾನಗಿ ಕಾನೂನು ಪ್ರಕಾರ ನೀಡುವಂತಿಲ್ಲ ಎಂದಿದ್ದಾರೆ.
ನಿಯಮಗಳನ್ನು ಉಲ್ಲಂಘಿಸಿ ಕೆಲವು ಕಟ್ಟಡಗಳ ಮಾಲೀಕರು ಶೌಚ ತ್ಯಾಜ್ಯಗಳನ್ನು ಪಂಪ್ ಮಾಡಿ ಚರಂಡಿ ಮೂಲಕ ಹರಿಸುತ್ತಿರುವ ಬಗ್ಗೆ ಸ್ಥಳೀಯ ಬಡಾವಣೆ ನಿವಾಸಿಗಳು ದೂರಿದ ಹಿನ್ನೆಲೆಯಲ್ಲಿ ಈ ಬಗ್ಗೆ ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹೆದ್ದಾರಿ ರಸ್ತೆಯಲ್ಲಿ ವಾಣಿಜ್ಯ ಕಟ್ಟಡಗಳ ಕಲುಷಿತ ನೀರು ಹರಿಸುತ್ತಿದ್ದು ಇದರಿಂದ ರಸ್ತೆ ಕೆಳಭಾಗದ ನಾಗರಿಕರ ಮನೆಗೆ ನೀರು ಹರಿಯುತ್ತಿದ್ದು ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗುತ್ತಿದೆ ಹಾಗೂ ಈ ವ್ಯಾಪ್ತಿಯಲ್ಲಿ ಮೂಗು ಮುಚ್ಚಿ ತಿರುಗಾಡುವಂತಾಗಿದೆ ಎಂದು ನಾಗರಿಕರು ಅಧಿಕಾರಿಗಳೊಂದಿಗೆ ದೂರಿದರು. ಸ್ಥಳದಲ್ಲಿದ್ದ ಪ.ಪಂ. ವಾರ್ಡ್ ಸದಸ್ಯರಾದ ಪ್ರಮೋದ್ ಮುತ್ತಪ್ಪ ಅವರು ಈ ಬಗ್ಗೆ ಅಧಿಕಾರಿ ಗಳಿಗೆ ತಿಳಿಸಿದರೂ ಯಾವದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಪ.ಪಂ. ಮೂಲಕ ಸಕ್ಕಿಂಗ್ ಯಂತ್ರದಲ್ಲಿ ಕಲುಷಿತ ನೀರನ್ನು ಮೋಟಾರ್ ಮೂಲಕ ಎತ್ತಿ ನಂತರ ಅದನ್ನು ಮಾರುಕಟ್ಟೆ ಬಳಿ ಕಾವೇರಿ ನದಿ ತಟದಲ್ಲಿ ಸುರಿಯುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿ ಡಾ. ಸುಧಾ, ಯಾವದೇ ಕಾರಣಕ್ಕೂ ಕಲುಷಿತ ತ್ಯಾಜ್ಯ ನದಿ ತಟದಲ್ಲಿ ಸುರಿಯದಂತೆ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು. ಇದೇ ಸಂದರ್ಭ ಮಾರುಕಟ್ಟೆ ರಸ್ತೆಯ ಬಳಿ ಬಿಎಸ್‍ಎಂ ಮೋಟಾರ್ಸ್ ವಾಹನ ಸರ್ವೀಸ್ ಸ್ಟೇಷನ್ ಒಂದರಿಂದ ಕಲುಷಿತ ತ್ಯಾಜ್ಯವನ್ನು ನದಿಗೆ ನೇರವಾಗಿ ಹರಿಸುತ್ತಿರುವ ಬಗ್ಗೆ ತರಾಟೆಗೆ ತೆಗೆದುಕೊಂಡ ಡಾ. ಸುಧಾ, ಮಾಲೀಕರ ಮೇಲೆ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಎಚ್ಚರಿಸಿದ್ದಾರೆ. ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಕಾವೇರಿ ನಿಸರ್ಗಧಾಮ ಎದುರುಗಡೆ ಎನ್‍ಟಿಸಿ ಖಾಸಗಿ ಪ್ರವಾಸಿ ಕೇಂದ್ರದ ಬಳಿ ಕಾವೇರಿ ನದಿ ತಟಕ್ಕೆ ಅಕ್ರಮವಾಗಿ ಮಣ್ಣು ತುಂಬಿ ನದಿಗೆ ಕಲುಷಿತ ಹರಿಸುತ್ತಿರುವ ಬಗ್ಗೆ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ಮಾಡಿದ ಡಾ. ಸುಧಾ ಪರಿಶೀಲನೆ ನಡೆಸಿ ಈ ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಸಂದರ್ಭ ಪ.ಪಂ. ಸದಸ್ಯ ಪ್ರಮೋದ್ ಮುತ್ತಪ್ಪ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದನ್, ಸ್ಥಳೀಯ ನಿವಾಸಿಗಳಾದ ಇಂದಿರಾ ಲಕ್ಷ್ಮಣ್, ಶ್ರೀನಿಧಿ ಮತ್ತಿತರರು ಇದ್ದರು.