ಸಿದ್ದಾಪುರ, ಮೇ 29: ನೆಲ್ಯಹುದಿಕೇರಿ ಹಾಗೂ ಅಭ್ಯತ್ ಮಂಗಲ ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿರುವ ಮತ್ತೊಂದು ಪುಂಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ನೆಲ್ಯಹುದಿಕೇರಿ ಹಾಗೂ ಅಭ್ಯತ್ ಮಂಗಲ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಹಿಂಡಿನಲ್ಲಿ ಉಪಟಳ ನೀಡುತ್ತಿದ್ದ, ಮನೆ ಹಾಗೂ ತೋಟಗಳಲ್ಲಿ ಪುಂಡಾಟಿಕೆ ಮಾಡುತ್ತಿದ್ದ ಅಂದಾಜು 20 ವರ್ಷ ಪ್ರಾಯದ ಪುಂಡಾನೆಯನ್ನು ಅರಣ್ಯ ಇಲಾಖೆ ಸೆರೆಹಿಡಿದು, ದುಬಾರೆ ಸಾಕಾನೆ ಶಿಬಿರಕ್ಕೆ ಸೇರ್ಪಡೆಗೊಳಿಸಿದ್ದಾರೆ. ಇದೀಗ ನೆಲ್ಯಹುದಿಕೇರಿಯ ಮೇರಿ ಲ್ಯಾಂಡ್ ಎಸ್ಟೇಟ್‍ನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡಿನ ಪೈಕಿ ತಪ್ಪಿಸಿಕೊಂಡು ದಾಂಧಲೆ ನಡೆಸುತ್ತಿರುವ ಒಂಟಿ ಸಲಗವೊಂದನ್ನು ಸೆರೆಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಸಾಕಾನೆಗಳೊಂದಿಗೆ ಸಜ್ಜುಗೊಂಡಿದ್ದಾರೆ.

ಮಂಗಳವಾರದಂದು 8 ಸಾಕಾನೆಗಳೊಂದಿಗೆ ನೆಲ್ಯಹುದಿಕೇರಿ ಮೇರಿ ಲ್ಯಾಂಡ್ ಕಾಫಿ ತೋಟದ ಓಳಗೆ ಕಾರ್ಯಾಚರಣೆ ನಡೆಸಿ,

(ಮೊದಲ ಪುಟದಿಂದ) ಪುಂಡಾನೆಯನ್ನು ಸೆರೆ ಹಿಡಿದ ಬಳಿಕ ಒಂದು ದಿನದ ವಿಶ್ರಾಂತಿಯನ್ನು 8 ಸಾಕಾನೆಗಳು ಹಾಗೂ ಸಿಬ್ಬಂದಿಗಳಿಗೆ ನೀಡಲಾಗಿದೆ. ಆದರೆ, ಈ ಭಾಗದ ಗ್ರಾಮಸ್ಥರ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನೆಯ ಪದಾಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ ಮೇರೆಗೆ ತಾ.30ರಂದು (ಇಂದು) ಮತ್ತೊಮ್ಮೆ ನೆಲ್ಯಹುದಿಕೇರಿಯ ಮೇರಿ ಲ್ಯಾಂಡ್ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ರೌಡಿ ಒಂಟಿ ಸಲಗವನ್ನು ಸೆರೆ ಹಿಡಿಯಲು ಕ್ರಮ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಪುಂಡಾನೆಯನ್ನು ಸೆರೆ ಹಿಡಿಯಲು ಆಗಮಿಸಿದ ಮತ್ತಿಗೋಡು ಸಾಕಾನೆ ಶಿಬಿರದ ಕೃಷ್ಣ, ದುಬಾರೆ ಸಾಕಾನೆ ಶಿಬಿರದ ಹರ್ಷ, ಧನಂಜಯ, ಲಕ್ಷ್ಮಣ, ಈಶ್ವರ, ಅಜ್ಜಯ್ಯ, ವಿಕ್ರಮ ಮೇರಿ ಲ್ಯಾಂಡ್ ಕಾಫಿ ತೋಟದಲ್ಲಿ ಸಿದ್ಧತೆ ನಡೆಸಿ ಸ್ಥಳದಲ್ಲೇ ಠಿಕಾಣಿ ಹೂಡಿವೆ. ಅರಣ್ಯ ಇಲಾಖಾಧಿಕಾರಿಗಳು ಕೂಡ ಒಂಟಿ ಸಲಗ ಇರುವದನ್ನು ಗುರುತಿಸಿದ್ದಾರೆ.

ಒಂಟಿ ಸಲಗವು ಈ ಹಿಂದೆ ನಲ್ವತ್ತೆಕ್ರೆ ಭಾಗದಲ್ಲಿ ಜನರ ಮೇಲೆ ದಾಳಿನಡೆಸಿ ಗಾಯಗೊಳಿಸಿದ ಘಟನೆಯೂ ನಡೆದಿದೆ. ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಾವಳಿಯಿಂದಾಗಿ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಇತ್ತೀಚೆಗೆ ಮೇರಿ ಲ್ಯಾಂಡ್ ಕಾಫಿ ತೋಟದ ಮಾಲಿಕರ ಕಾರಿನ ಮೇಲೆ ಕಾಡಾನೆಯು ದಂತದಿಂದ ತಿವಿದು ಹಾನಿಗೊಳಿಸಿತ್ತು. ಮನೆಯ ಸಮೀಪದ ನೀರಿನ ಟ್ಯಾಂಕ್‍ನಿಂದ ಮರಿ ಆನೆಯೊಂದಿಗೆ ಕಾಡಾನೆಯೊಂದು ಬಂದು ನೀರು ಕುಡಿದ ಪ್ರಸಂಗವೂ ನಡೆದಿದೆ. ಈಗಾಗಲೇ ಸರಕಾರ 2 ಕಾಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಮಂಗಳವಾರದಂದು ಒಂದು ಪುಂಡಾನೆಯನ್ನು ಸೆರೆ ಹಿಡಿದಿದ್ದು, ಮತ್ತೊಂದನ್ನು ಸುಂಟಿಕೊಪ್ಪ ಬಳಿಯ ಮೋದೂರಿನಲ್ಲಿ ಹಿಡಿಯಲು ಚಿಂತಿಸಿ ಯೋಜನೆಯನ್ನು ರೂಪಿಸಲಾಗಿತ್ತು. ಆದರೇ ಮೂಲಗಳ ಪ್ರಕಾರ ಮೋದೂರಿನಲ್ಲಿದ್ದ ಕಾಡಾನೆಗಳು ವಿಂಗಡಣೆಯಾಗಿ ಬೇರೆ ಬೇರೆ ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಿವೆ ಎನ್ನಲಾಗಿದೆ.

ಕಳೆದ ಕೆಲವು ದಿನಗಳಿಂದ ಅಭ್ಯತ್‍ಮಂಗಲ, ವಾಲ್ನೂರು ತ್ಯಾಗತ್ತೂರು, ನೆಲ್ಯಹುದಿಕೇರಿ ಬಾಗದಲ್ಲಿ 20ಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟು ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿರುವದಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

-ವರದಿ: ಎ.ಎನ್ ವಾಸು