ಮಡಿಕೇರಿ ಮೇ 29 :ಕೊಡಗಿನ ಕೆಲವು ಗ್ರಾಮಗಳನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಅಲ್ಲಿನ ನಿವಾಸಿಗಳನ್ನು ಮಳೆಗಾಲಕ್ಕೂ ಮೊದಲು ಸ್ಥಳಾಂತರಗೊಳ್ಳುವಂತೆ ತಿಳಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ ಬಿಜೆಪಿ ವಕ್ತಾರ ನಾಪಂಡ ರವಿ ಕಾಳಪ್ಪ, ಸರ್ಕಾರ ಕೈ ತೊಳೆದುಕೊಳ್ಳುವ ತಂತ್ರಗಾರಿಕೆಯನ್ನು ಕೈಬಿಟ್ಟು ಗ್ರಾಮದಿಂದ ಸ್ಥಳಾಂತರ ಗೊಳ್ಳುವವರಿಗೆ ಅಗತ್ಯ ವಸತಿ ವ್ಯವಸ್ಥೆ ಅಥವಾ ಮನೆ ಬಾಡಿಗೆಯನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಮಹಾಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರು ಇನ್ನೂ ಕೂಡ ಸುಧಾರಿಸಿಕೊಳ್ಳದ ಸ್ಥಿತಿಯಲ್ಲಿರುವಾಗ; ರಾಜ್ಯ ಸರಕಾರ ದಿಢೀರಾಗಿ ಗ್ರಾಮ ಬಿಡುವಂತೆ ತಿಳಿಸಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸ್ಥಳಾಂತರ ಗೊಳ್ಳುವವರು ಅತಂತ್ರ ಸ್ಥಿತಿಯನ್ನು ಅನುಭವಿಸುವದರಿಂದ ಅವರಿಗೆ ಪರ್ಯಾಯ ವ್ಯವಸ್ಥೆ ಏನು ಎಂಬುವದನ್ನು ಸ್ಪಷ್ಟಪಡಿಸಿಲ್ಲ. ಸರಕಾರದ ಈ ನಿರ್ಲಕ್ಷ್ಯ ಮನೋಭಾವನೆಯನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಅಲ್ಲದೆ, ಸೂಕ್ತ ಕ್ರಮ
(ಮೊದಲ ಪುಟದಿಂದ) ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ಕೈಗೆತ್ತಿಕೊಳ್ಳುವದಾಗಿ ಎಚ್ಚರಿಕೆ ನೀಡಿದರು.
ಕೇಂದ್ರ ಸರಕಾರ ಮಳೆಹಾನಿ ಪರಿಹಾರವಾಗಿ ಕೊಡಗು ಜಿಲ್ಲೆಗೆ ಸೀಮಿತವಾಗಿ 546 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರಕಾರ ಇದನ್ನು ಜಿಲ್ಲೆಗೆ ಸದ್ಬಳಕೆ ಮಾಡದೆ ಇತೆರೆಡೆಗೆ ಹಂಚಿಕೆ ಮಾಡುವ ಮೂಲಕ ದುರಪಯೋಗ ಪಡಿಸಿದೆ ಎಂದು ಆರೋಪಿಸಿದರು. ಸಂತ್ರಸ್ತ ರೈತರು ಹಾಗೂ ಬೆಳೆಗಾರರ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಮನವಿಮಾಡಿಕೊಳ್ಳಲಾಗುವದು. ಈ ಬೇಡಿಕೆಗೆ ಎರಡೂ ಸರಕಾರಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಲಿವೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ದಾನಿಗಳು ಹಾಗೂ ಸರ್ಕಾರಿ ಉದ್ಯೋಗಿಗಳು ಪರಿಹಾರ ನಿಧಿಗೆ ಸಾಕಷ್ಟು ಆರ್ಥಿಕ ನೆರವನ್ನು ನೀಡಿದ್ದಾರೆ. ಆದರೆ ಸರಕಾರ ತನ್ನ ಹಣದಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಪರಿಹಾರ ನಿಧಿಗೆ ಬಂದ ದಾನದ ಹಣವನ್ನು ಬಳಸಿಕೊಂಡಿದೆ ಎಂದು ಟೀಕಿಸಿದರು. ಸರಕಾರದ ಹಣದಿಂದ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಜಿಲ್ಲಾಡಳಿತ ಪರಿಹಾರ ಅದಾಲತ್ ಸೇರಿದಂತೆ ಕೆಲವು ಪರಿಹಾರ ಕಾರ್ಯಗಳನ್ನು ಕೈಗೊಂಡಿರುವದು ಸ್ವಾಗತಾರ್ಹ. ಆದರೆ ಗ್ರಾಮದಿಂದ ಸ್ಥಳಾಂತರ ಗೊಳ್ಳುವವರಿಗೆ ಎಲ್ಲಿ ಆಶ್ರಯ ಪಡೆಯಬೇಕು ಎನ್ನುವದರ ಬಗ್ಗೆ ಮಾರ್ಗಸೂಚಿ ನೀಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಈಗ ನಡೆಯುತ್ತಿರುವ ಕಾಮಗಾರಿಗಳು ಕೇವಲ ತಾತ್ಕಾಲಿಕವಷ್ಟೆ ಆಗಿದ್ದು, ಗ್ರಾಮಸ್ಥರ ಹಿತರಕ್ಷಣೆಯ ದೃಷ್ಟಿಯಿಂದ ಶಾಶ್ವತ ಯೋಜನೆಗಳು ಸಾಕಾರಗೊಳ್ಳಬೇಕಿದೆ ಎಂದು ರವಿಕಾಳಪ್ಪ ಹೇಳಿದರು.
ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ಮಾತನಾಡಿ, ಕಳೆದ ವರ್ಷ ಸುರಿದ ಮಹಾಮಳೆಗೆ ಮಡಿಕೇರಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣ ಹಾನಿಗೀಡಾಗಿದೆ. ಆದರೆ ಇಲ್ಲಿಯವರೆಗೆ ಪ್ರಯಾಣಿಕರಿಗೆ ಸೂಕ್ತ ತಂಗುದಾಣದ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ತಕ್ಷಣ ಜಿಲ್ಲಾಡಳಿತ ತಾತ್ಕಾಲಿಕ ತಂಗುದಾಣ ಮತ್ತು ಶೌಚಾಲಯವನ್ನು ನಿರ್ಮಿಸಿಕೊಡುವ ಮೂಲಕ ಮಳೆ, ಬಿಸಿಲಿನಲ್ಲಿ ಪ್ರಯಾಣಿಕರು ಕಷ್ಟಪಡುವದನ್ನು ತಪ್ಪಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಕಾಂತಿ ಸತೀಶ್ ಹಾಗೂ ವಿ.ಕೆ.ಲೋಕೇಶ್ ಉಪಸ್ಥಿತರಿದ್ದರು.