ಮಡಿಕೇರಿ, ಮೇ 29: ಕಳೆದ ಸಾಲಿನ ಶೈಕ್ಷಣಿಕ ಪರೀಕ್ಷೆಗಳನ್ನು ಪೂರೈಸಿ, ಮುಂದಿನ ತರಗತಿಗಳಿಗೆ ತೇರ್ಗಡೆಗೊಳ್ಳುವದರೊಂದಿಗೆ, ಬೇಸಿಗೆಯ ರಜೆಯಲ್ಲಿದ್ದ ವಿದ್ಯಾರ್ಥಿಗಳು ಇದೀಗ ರಜೆ ಪೂರೈಸಿ ಮುಂದಿನ ಸಾಲಿನ ಶೈಕ್ಷಣಿಕ ಹಾದಿಯಲ್ಲಿ ಇಂದು ಶಾಲೆಗಳತ್ತ ಹೆಜ್ಜೆ ಇರಿಸಿದ್ದಾರೆ.ಕೊಡಗು ಜಿಲ್ಲೆಯ 380 ಸರಕಾರಿ ಪ್ರಾಥಮಿಕ ಶಾಲೆಗಳು, 47 ಸರಕಾರಿ ಪ್ರೌಢ ಶಾಲೆಗಳೊಂದಿಗೆ 48 ಖಾಸಗಿ ಪ್ರೌಢಶಾಲೆಗಳು, 3 ಖಾಸಗಿ ಪ್ರಾಥಮಿಕ ಶಾಲೆಗಳು ಆರಂಭಗೊಂಡಿವೆ. ಅಲ್ಲದೆ 114 ಅನುದಾನ ರಹಿತ ಪ್ರಾಥಮಿಕ ಶಾಲೆಗಳು ಮತ್ತು 73 ಪ್ರೌಢಶಾಲೆಗಳಲ್ಲಿಯೂ ಶೈಕ್ಷಣಿಕ ಚಟುವಟಿಕೆ ಆರಂಭಗೊಳ್ಳುವಂತಾಗಿದೆ.
ಈಗಷ್ಟೇ ತರಗತಿಗಳು ಆರಂಭಗೊಂಡಿದ್ದು, ಜಿಲ್ಲೆಯ ಮಕ್ಕಳ ಹಾಜರಾತಿ ಹಾಗೂ ನಿಖರವಾಗಿ ವಿದ್ಯಾರ್ಥಿಗಳ ಸಂಖ್ಯೆ ಇನ್ನೊಂದು ವಾರದಲ್ಲಿ ಲಭಿಸಲಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ. ಅಲ್ಲದೆ ಇಂದು ಎಲ್ಲೆಡೆ ವಿದ್ಯಾರ್ಥಿಗಳನ್ನು ಶಿಕ್ಷಕ ವೃಂದ, ಪೋಷಕ ಮಂಡಳಿ ಸ್ವಾಗತಿಸುವ ಮುಖಾಂತರ ಬಿಸಿಯೂಟದೊಂದಿಗೆ ಸಿಹಿ ನೀಡಿ ಬರಮಾಡಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ.
ವಿನೂತನ ಕಾರ್ಯಕ್ರಮ
ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವ ವಿನೂತನವಾಗಿ ಆಚರಿಸಲ್ಪಟ್ಟಿತು ಶೈಕ್ಷಣಿಕ ಸಾಲಿನ ಮೊದಲ ದಿನವು
(ಮೊದಲ ಪುಟದಿಂದ) ವಿದ್ಯಾರ್ಥಿಯು ತನ್ನ ವ್ಯಾಸಂಗದ ಅವಧಿಯನ್ನು ಲವಲವಿಕೆಯಿಂದ ಕಳೆಯಲು ಪ್ರೇರಣೆ ನೀಡಿ ಮುಂದಿನ ದಿನಗಳಿಗೆ ಉತ್ಸಾಹ ತುಂಬುವಂತಿರ ಬೇಕು ಎಂಬ ಉದ್ದೇಶದಿಂದ ಶಿಕ್ಷಕರು ಶಾಲೆಯ ವಾತಾವರಣವನ್ನು ರೂಪಿಸಿದ್ದರು ಪ್ರತಿ ಮಗುವಿನ ಕೈಗೆ ಹೂಗುಚ್ಛ ಮತ್ತು ಸಿಹಿ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು ಶಾಲಾ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಿ ಪ್ರಾಣಿ ಪಕ್ಷಿ ಕೀಟಗಳ ಪ್ರತಿಕೃತಿಗಳನ್ನು; ಗೂಡುಗಳನ್ನು ಆಟಿಕೆ ಸಾಮಗ್ರಿಗಳನ್ನು ಇರಿಸಿ ಮಕ್ಕಳ ಮನಸ್ಸನ್ನು ಶಾಲೆಯೆಡೆಗೆ ಆಕರ್ಷಣೆಯಾಗುವಂತೆ ಮಾಡಲಾಗಿತ್ತು ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಸತೀಶ್ ಮತ್ತು ಎಸ್‍ಡಿಎಂಸಿ ಅಧ್ಯಕ್ಷ ಮಣಿ ಕಾರ್ಯಕ್ರಮ ಉದ್ಘಾಟಿಸಿದರು ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಅಕ್ಕಿ ತಟ್ಟೆಯಲ್ಲಿ ಅಕ್ಷರಾಭ್ಯಾಸ ಮಾಡಿಸಲಾಯಿತು.
-ನರೇಶ್, ವಿ.ಸಿ. ಸುರೇಶ್