*ಸಿದ್ದಾಪುರ, ಮೇ 28: ನಿರಂತರ ಕಾಡಾನೆ ಹಾವಳಿಯಿಂದ ತತ್ತರಿಸಿಹೋಗಿದ್ದ ಇಲ್ಲಿನ ಜನತೆ ಕಳೆದ ಒಂದು ವರ್ಷದಿಂದ ಕಾಡಾನೆಗಳ ಉಪಟಳವಿಲ್ಲದೆ ಒಂದಷ್ಟು ನಿರಾತಂಕ ವಾತಾವರಣ ಕಂಡುಕೊಂಡಿದ್ದರು. ಆದರೆ..., ಕಳೆದ ಕೆಲ ದಿನಗಳ ಹಿಂದೆ ಸಿದ್ದಾಪುರ, ನೆಲ್ಯಹುದಿಕೇರಿ, ಅಭ್ಯತ್‍ಮಂಗಲ, ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯಲ್ಲಿ ಕಾಡಾನೆಗಳು ಮತ್ತೆ ದಿಢೀರ್ ಪ್ರತ್ಯಕ್ಷಗೊಂಡಿದ್ದು ಮತ್ತೆ ಗ್ರಾಮ ವ್ಯಾಪ್ತಿಯಲ್ಲಿ ಆತಂಕ ಮನೆ ಮಾಡಿದೆ.
ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಟೀಕ್‍ವುಡ್ ಎಸ್ಟೇಟ್, ಕರಡಿಗೋಡು, ಅವರೆಗುಂದ ವ್ಯಾಪ್ತಿಯಲ್ಲಿ ಹಿಂಡು ಹಿಂಡು ಕಾಡಾನೆಗಳು ಬೀಡುಬಿಟ್ಟಿವೆ.
ವಾರಗಳ ಹಿಂದೆ ಟೀಕ್‍ವುಡ್ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಕೆಲವೇ ಅಂತರದಿಂದ ಕಾಡಾನೆ ದಾಳಿಯಿಂದ ಪಾರಾದ ಘಟನೆ ಇಲ್ಲಿನ ಕಾರ್ಮಿಕರನ್ನು ಭಯಭೀತಗೊಳಿ ಸಿದೆ. ವರ್ಷಗಳ ಹಿಂದೆ ಈ ವ್ಯಾಪ್ತಿಯಲ್ಲಿ ಕಾಡಾನÉ ದಾಳಿಗೆ ಕರಡಿಗೋಡಿನ ಕಾಫಿ ಬೆಳೆಗಾರ ರೋರ್ವರು ಮೃತಪಟ್ಟಿದ್ದು ಇದರ ನೋವು ಇನ್ನೂ ಇಲ್ಲಿನವರಲ್ಲಿ ಮಡುಗಟ್ಟಿದೆ.
ಮುಂಗಾರು ಪ್ರಾರಂಭಗೊಳ್ಳುವ ಮುನ್ನ ಸುರಿದ ಮಳೆಯಿಂದ ಉತ್ಸುಕರಾಗಿರುವ ಇಲ್ಲಿನ ಕೃಷಿಕರು ಮತ್ತು ಬೆಳೆಗಾರರು ಕಾಫಿ ತೋಟದಲ್ಲಿ ಗೊಬ್ಬರ ಹಾಕುವದು ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಕಾಡಾನೆ ಹಾವಳಿಯು ಕಾಫಿ ತೋಟಗಳ ಪ್ರತಿ ಕೆಲಸವು ನಿಧಾನಗತಿಯಲ್ಲಿ ಸಾಗುವಂತೆ ಮಾಡಿದೆ. ಇತ್ತ ಕಾರ್ಮಿಕರು ಕೂಡ ತೋಟದೊಳಗೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭಗೊಂಡಿದ್ದು, ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಗೊಂಡಿದೆ. ಮನೆಯ ಆವರಣದಲ್ಲಿಯೇ ಕಾಡಾನೆ ಗಳು ಬೀಡು ಬಿಟ್ಟಿರುವದರಿಂದ, ಮನೆಯ ಹಿತ್ತಲಿಗೆ ಕಾಡಾನೆಗಳು ರಾತ್ರಿ ವೇಳೆ ದಾಂದಲೆ ಮಾಡುವದರಿಂದ, ರಸ್ತೆಗಳಲ್ಲಿ ಕಾಡಾನೆಗಳು ಕಂಡುಬರುತ್ತಿ ರುವದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಹಿಂಜರಿಯುತ್ತಿದ್ದಾರೆ. ಪೋಷಕರು ಕೂಡ ಆನೆಗಳೊಂದಿಗೆ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ತಮ್ಮ ಮಕ್ಕಳನ್ನು ವ್ಯಾಸಂಗಕ್ಕೆ ಕಳುಹಿಸುವ ಪರಿಸ್ಥಿತಿ ಉಂಟಾಗಿರುವದರಿಂದ ಗ್ರಾಮವನ್ನೇ ತೊರೆಯುವ ಚಿಂತನೆಯಲ್ಲಿ ಇದ್ದಾರೆ.
ಈಗಾಗಲೇ ಶಾಲಾ-ಕಾಲೇಜುಗಳಿಗೆ ಪ್ರವೇಶಾತಿ ಪ್ರಾರಂಭ ಗೊಂಡಿದ್ದರೂ ಕಾಡಾನೆ ಹಾವಳಿ ಯಿಂದ ಸಮರ್ಪಕ ಪ್ರವೇಶಾತಿ ನಡೆಯುತ್ತಿಲ್ಲ ಎಂದು ಶಾಲಾಡಳಿತ ಮಂಡಳಿಯ ಪ್ರಮುಖರು ಅಳಲು ತೋಡಿಕೊಂಡಿದ್ದಾರೆ.
ಕಾಡಿನೊಳಗೆ ಕಾಡಾನೆಗಳಿಗೆ ಸರಿಯಾದ ಆಹಾರ ಮತ್ತು ನೀರಿನ ಕೊರತೆಯಿರುವದರಿಂದ ಕಾಡಾನೆಗಳು ನಾಡಿನೆಡೆಗೆ ಲಗ್ಗೆ ಹಾಕುತ್ತಿವೆ. ಜನಸಂಚರಿಸುವ ರಸ್ತೆಯಲ್ಲಿಯೇ ನಿತ್ಯ ಕಾಡಾನೆಗಳು ಪೆÉರೇಡ್ ನಡೆಸುತ್ತಿದ್ದು ಈ ವ್ಯಾಪ್ತಿಯಲ್ಲಿ ಆನೆ ಮಾನವ ಸಂಘರ್ಷ ಮುಗಿಲುಮುಟ್ಟಿದೆ. ಅರಣ್ಯ ಇಲಾಖೆ ಆನೆಗಳ ಉಪಟಳ ಶಮನ ಗೊಳಿಸಲು ಸೂಕ್ತ ಕ್ರಮಕ್ಕೆ ಮುಂದಾಗ ಬೇಕಿದೆ ಎಂಬ ಒತ್ತಾಯ ಸಾರ್ವ ಜನಿಕ ವಲಯದಲ್ಲಿ ವ್ಯಕ್ತಗೊಂಡಿದೆ.
-ಅಂಚೆಮನೆ ಸುಧಿ