ಸೋಮವಾರಪೇಟೆ, ಮೇ 28: ತಾಲೂಕಿನ ಸೂರ್ಲಬ್ಬಿ ಗ್ರಾಮದ ಕೋಟೆಬೆಟ್ಟ ತಟದಲ್ಲಿರುವ ಎರ್ಕೊಳ ಎಂಬಲ್ಲಿ ಹುಲಿ ಧಾಳಿಗೆ ಹಸು ಬಲಿಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.
ಎರ್ಕೊಳ ಗ್ರಾಮದ ಪುದಿಯತಂಡ ಮೊಣ್ಣಯ್ಯ ಅವರಿಗೆ ಸೇರಿದ, ಕಳೆದ 5 ತಿಂಗಳ ಹಿಂದೆ ಕರುವಿಗೆ ಜನ್ಮ ನೀಡಿದ್ದ ಸಿಂಧಿ ಹಸುವಿನ ಮೇಲೆ ಹುಲಿ ಧಾಳಿ ನಡೆಸಿ ಕೊಂದುಹಾಕಿದೆ.
ಗದ್ದೆಯ ಬದಿಯಲ್ಲಿ ಕಟ್ಟಿಹಾಕಿದ್ದ ಹಸುವಿನ ಮೇಲೆ ಧಾಳಿ ನಡೆಸಿ ಸುಮಾರು 80 ಮೀಟರ್ ದೂರಕ್ಕೆ ಎಳೆದೊಯ್ದಿರುವ ಹುಲಿ, ಹಸುವನ್ನು ತಿಂದು ಕಾಲಿನ ಭಾಗವನ್ನು ಮಾತ್ರ ಉಳಿಸಿದೆ.
ಹುಲಿ ಧಾಳಿಯಿಂದ ಸುಮಾರು 45 ಸಾವಿರ ಮೌಲ್ಯದ ಹಸುವನ್ನು ಕಳೆದುಕೊಂಡಿದ್ದು, ಪರಿಹಾರ ಒದಗಿಸುವಂತೆ ಪುದಿಯತಂಡ ಮೊಣ್ಣಯ್ಯ ಅವರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಯತೀಶ್ ಮತ್ತು ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸೂರ್ಲಬ್ಬಿ ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಹಾವಳಿ ನಿರಂತರವಾಗಿದ್ದು, ಈಗಾಗಲೇ ಅನೇಕ ಕೃಷಿಕರು ತಮ್ಮ ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಗ್ರಾಮಸ್ಥರೂ ಸಹ ಜೀವಭಯದಿಂದಲೇ ದಿನದೂಡುತ್ತಿದ್ದು, ತಕ್ಷಣ ಹುಲಿಯನ್ನು ಸೆರೆಹಿಡಿಯಬೇಕೆಂದು ಸ್ಥಳೀಯರಾದ ಬೋಪಣ್ಣ ಒತ್ತಾಯಿಸಿದ್ದಾರೆ.