ಮಡಿಕೇರಿ, ಮೇ 26: ಭಾರತ ಸೇವಾದಳ ಕೊಡಗು ಜಿಲ್ಲಾ ಸಮಿತಿ ವತಿಯಿಂದ ‘ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ’ ಆಂದೋಲನ ಕಾರ್ಯಕ್ರಮವನ್ನು ಮಡಿಕೇರಿ ನಗರ ಮತ್ತು ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಸಮಿತಿ ಸದಸ್ಯರಾದ ಎ.ಕೆ. ಪಾಲಾಕ್ಷ, ಜಿಲ್ಲಾ ಕಾರ್ಯದರ್ಶಿ ಮೋಂತಿ ಗಣೇಶ್, ಜಿಲ್ಲಾ ಸಮಿತಿ ಸದಸ್ಯರಾದ ಬಿ.ಡಿ. ಮಂಜುನಾಥ್, ಬಿ.ಕೆ. ಬಾಲಕೃಷ್ಣ, ಕೆ.ಆರ್. ಧರ್ಮಪಾಲ (ಪ್ರಭು) ಮತ್ತು ಜಿಲ್ಲಾ ಸಂಘಟಕರಾದ ಎಂ. ಉಮೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಾಲೂಕು ಮತ್ತು ನಗರದ ವಿವಿಧ ಬಡಾವಣೆಗಳು, ಮನೆ ಮನೆಗೆ ತೆರಳಿ, ಮುಖ್ಯ ರಸ್ತೆಗಳಲ್ಲಿ, ಅಂಗಡಿ ಮುಂಗಟ್ಟುಗಳು, ಸಾರ್ವಜನಿಕರನ್ನು ಉದ್ದೇಶಿಸಿ, ಇಂದು ಸರಕಾರಿ ಶಾಲೆಗಳಲ್ಲಿ ಅತ್ಯುತ್ತಮ ವಿದ್ಯಾಭ್ಯಾಸ ಹೊಂದಿದ, ತರಬೇತಿ ಹೊಂದಿದ, ನುರಿತ ಶಿಕ್ಷಕರುಗಳಿದ್ದಾರೆ.

ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಎಷ್ಟೋ ಮಂದಿ ವೈದ್ಯರು, ಇಂಜಿನಿಯರ್‍ಗಳು, ಶಿಕ್ಷಕರು, ಸೇನೆಗಳಲ್ಲಿ ಅತ್ಯುತ್ತಮ ಹುದ್ದೆಗಳನ್ನು ಹೊಂದಿದ್ದಾರೆ. ಇಂದು ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸಗಳಿಗೆ ಉಚಿತ ಸೌಲಭ್ಯಗಳು ದೊರೆಯುತ್ತಿವೆ. ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ಅಕ್ಷರ ದಾಸೋಹ (ಬಿಸಿಯೂಟ), 1ನೇ ತರಗತಿಯಿಂದಲೇ ಇಂಗ್ಲೀಷ್ ಕಲಿಕೆ, ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ, ಕ್ರೀಡಾ ಚಟುವಟಿಕೆಗಳಿಗೆ ಪ್ರಾತಿನಿದ್ಯ ಮುಂತಾದ ವಿಚಾರಗಳ ಬಗ್ಗೆ ವಿವರಣೆ ನೀಡಿದರು.